ಬೆಂಗಳೂರು : ಚುನಾವಣೆಯಲ್ಲಿ ಸೋತ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ನನ್ನ ಸರ್ಕಾರವನ್ನು ಉರುಳಿಸಲು ಎಷ್ಟೆಲ್ಲಾ ಕೆಲಸ ಮಾಡಿದ್ದಾರೆ? ಏನೆಲ್ಲಾ ಶ್ರಮವಹಿಸಿದ್ದಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಸರ್ಕಾರ ಬೀಳಿಸಿದ ಪರಿಣಾಮ ಅವರನ್ನು ಎಂಎಲ್‌ಸಿ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಇಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಮುಂದೆ ಯೋಗೇಶ್ವರ್ ಸಚಿವರೂ ಆಗಬಹುದು. ಅದು ನನಗೆ ಸಂಬಂಧಿಸಿಲ್ಲ. ವಿಧಾನ ಪರಿಷತ್ ಸದಸ್ಯರಾದ ಕೂಡಲೇ ಅವರು ಆಕಾಶದಲ್ಲಿ ತೇಲಾಡುತ್ತಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ತಗ್ಗಿ ಬಗ್ಗಿ ನಡೆಯಬೇಕು. ನಾನು ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಬೆಂಬಲ ನೀಡಲು ಹೋಗುವುದಿಲ್ಲ. ನನ್ನ ಅವಧಿಯಲ್ಲಿ ಸರ್ಕಾರ ಅಸ್ಥಿರಗೊಳಿಸಲಾಗುತ್ತಿದೆ ಎಂಬ ಪ್ರಚಾರದಿಂದ ಸರ್ಕಾರದ ಆಡಳಿತದ ಮೇಲೆ ದುಷ್ಪರಿಣಾಮವಾಯಿತು. ಇದೀಗ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿಯೂ ಅದೇ ಆಗುತ್ತಿದೆ ಎಂದು ಹೇಳಿದ್ದಾರೆ.
ಸಣ್ಣ ರಾಜಕೀಯ ಬಿಟ್ಟು, ಬಿಜೆಪಿಯವರು ನೀಡಿರುವ ಎಂಎಲ್‌ಸಿ ಸ್ಥಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನನ್ನ ವಿರುದ್ಧ ಸಂಘಟನೆ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ತೆಗೆಯಲು ಪ್ರಮುಖ ಪಾತ್ರ ವಹಿಸಿದ್ದರಿಂದ ಉತ್ತಮ ಉಡುಗೊರೆ ನೀಡಲಾಗಿದೆ ಎಂದು ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನನ್ನ ಅಸ್ತಿತ್ವ ಇಲ್ಲದಂತೆ ಮಾಡಲು ಹೊರಟಿದ್ದಾರೆ...
ರಾಮನಗರದಲ್ಲಿ ಸ್ಥಳೀಯ ಮಟ್ಟದಲ್ಲಿ ನನ್ನ ಅಸ್ತಿತ್ವ ಇಲ್ಲದಂತೆ ಮಾಡಲು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಒಗ್ಗಟ್ಟಾಗಿದ್ದಾರೆ. ಆದರೆ, ರಾಮನಗರದ ಜನತೆಗೆ ನಾನು ಏನು ಎಂದು ಗೊತ್ತಿದೆ. ನಾನು ರಾಮನಗರದ ಸ್ಥಳೀಯ ಮಟ್ಟದಲ್ಲಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ ಎಂದು ಎದುರೇಟು ನೀಡಿದ್ದಾರೆ.
ನಾನು ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ ಎಂಬುದು ಸುಳ್ಳು. ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇನೆ. ಇದರಲ್ಲಿ ಬೆಂಬಲ ನೀಡುವ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಜೆಡಿಎಸ್ ಪಕ್ಷವನ್ನು ಬಿಜೆಪಿ ‘ಬಿ’ ಟೀಮ್ ಎಂದು ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಯಿತು. ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ನೋವಿಗೆ ಸ್ಪಂದಿಸುವ ರೀತಿಯಲ್ಲಿ ಸರ್ಕಾರಕ್ಕೆ ಸಲಹೆ ನೀಡಬೇಕೇ ಹೊರತು ಹೋರಾಟ ಮಾಡುವ ಸಮಯ ಇದಲ್ಲ. ಇದರಿಂದ ಜನರಿಗೆ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಆರು ತಿಂಗಳು ಪೂರೈಸಿದ ಬಿಎಸ್‌ವೈ ಸರ್ಕಾರ, ಇದೀಗ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಸರ್ಕಾರದ ಸಾಧನೆ ಏನೆಂಬುದು 2021 ಕ್ಕೆ ಗೊತ್ತಾಗಲಿದೆ. ಇಲಾಖೆಗಳ ಸಚಿವರ ನಡುವೆಯೇ ಹೊಂದಾಣಿಕೆ ಇಲ್ಲದ ಕಾರಣ ಕೊರೊನಾ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.