ಬೆಂಗಳೂರು: 'ಜನಸ್ವರಾಜ್ ಯಾತ್ರೆ'(Jan Swaraj Yatra) ಹೆಸರಿನಲ್ಲಿ ಜಾತ್ರೆ ಮಾಡುವ ಸಮಯ ಇದಲ್ಲ. ಶಂಖ ಊದಿಕೊಂಡು ಹೋಗಿ ರೈತರ ಕಣ್ಣೀರನ್ನು ಅಣಕಿಸಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ(Former cm HD Kumaraswamy) ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ಕೃಷಿ ಕಾಯ್ದೆ ವಾಪಸ್ ಪಡೆದೆವು ಎಂದು ಬೀಗುತ್ತಾ, ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಸರ್ಕಾರ ಅಧಿಕಾರ ರಾಜಕಾರಣದಲ್ಲಿ ಮುಳುಗಿ ಮನುಷ್ಯತ್ವ ಮರೆಯಬಾರದು. ಇಷ್ಟೆಲ್ಲ ಅನಾಹುತ ಆಗುತ್ತಿದ್ದರೂ ಕೃಷಿ ಸಚಿವರು, ಅವರ ಇಲಾಖೆ ಹಾಗೂ ಕಂದಾಯ ಇಲಾಖೆ ಏನು ಮಾಡುತ್ತಿದೆ?.
ಈಗಾಗಲೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡಲಾಗಿದೆಯಾ?. ಬೆಳೆ ವಿಮೆ ಪರಿಸ್ಥಿತಿ ಏನು?.ಕಾಟಾಚಾರಕ್ಕೆ ಸರ್ವೇ ಮಾಡಿ ಸಭೆಗಳಲ್ಲಿ ಕಾಲಹರಣ ಮಾಡುವುದು ಬೇಡ. ಕರ್ನಾಟಕದ ರೈತರು ಇಷ್ಟು ದೊಡ್ಡ ಸಂಕಷ್ಟಕ್ಕೆ ಹಿಂದೆಂದೂ ಸಿಲುಕಿರಲಿಲ್ಲ. ರಾಜ್ಯ ಸರ್ಕಾರ ಮಾಡಿರುವುದೇನು? ಸಚಿವರು ಎಲ್ಲಿದ್ದಾರೆ? ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.
ತುರ್ತು ಕ್ರಮಕ್ಕೆ ಆಗ್ರಹ:
ಅಧಿಕಾರಿಗಳು ಏನು ಮಾಡುತ್ತಿದ್ದಾರೆ?. ಸರ್ಕಾರ ಸಭೆಗಳಿಗೆ ಸೀಮಿತವಾದರೆ ಪ್ರಯೋಜನ ಶೂನ್ಯ. ಅಧಿಕಾರಿಗಳು ಹಳ್ಳಿಗಳತ್ತ ನಡೆಯಲಿ. ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿಗಳೆಂದು ನೇಮಕವಾದ ಸಚಿವರು ಎಲ್ಲಿ?. ಅನೇಕ ಸಚಿವರಂತೂ ಜಿಲ್ಲೆಗಳ ಕಥೆ ಹಾಗಿರಲಿ, ಅವರ ಕಚೇರಿಗಳಲ್ಲೇ ಪತ್ತೆ ಇಲ್ಲ. ಮುಖ್ಯಮಂತ್ರಿಗಳು ಕೂಡಲೇ ಸಚಿವರನ್ನು ಜಿಲ್ಲೆಗಳಿಗೆ ಅಟ್ಟಬೇಕು. ಮಳೆ - ಬೆಳೆ ಪರಿಹಾರ ಕಾರ್ಯಕ್ರಮಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.