ಬೆಂಗಳೂರು: ಪೆಟ್ರೋಲ್ ಹಾಗು ಡೀಸೆಲ್ ಬೆಲೆಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಇಳಿಕೆ ಮಾಡಿದರೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಉಪ ಸಮರದ ಸೋಲಿನ ನಂತರ ಬೆಲೆ ಕಡಿಮೆ ಮಾಡಿದ್ದಾರೆ. ಇನ್ಮುಂದೆ ಜನ ಇದೇ ರೀತಿ ದರ ಕಡಿಮೆ ಮಾಡಿಸಿಕೊಳ್ಳುತ್ತಾರೆ ಎಂದು ಕೇಸರಿ ಪಕ್ಷವನ್ನು ನೆಟ್ಟಿಗರು ಕುಟುಕಿದ್ದಾರೆ.
ಬಿಎಸ್ವೈ ಮೆಚ್ಚುಗೆ:
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿ ಜನರಿಗೆ ದೀಪಾವಳಿ ಉಡುಗೊರೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಇಂಧನ ದರ ಇಳಿಕೆ ಮಾಡಿ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಜನರಿಗೆ ನೆರವಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಧನ್ಯವಾದಗಳು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಯಡಿಯೂರಪ್ಪ ಟ್ವೀಟ್ಗೆ ನೆಟ್ಟಿಗರು ಕಮೆಂಟ್ ಮಾಡಿದ್ದು, ಬಿಜೆಪಿ ಕಾಲೆಳೆದಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ದಿನ ನಿತ್ಯದ ವಸ್ತುಗಳ ಬೆಲೆ ಕಡಿಮೆ ಆಗಬೇಕಾದ್ರೆ, ನೀವು ಎಲೆಕ್ಷನ್ ಸೋತಾಗ ಆಗುತ್ತದೆ ಎಂದಾಯ್ತು. ನಿಮ್ಮ ಪಕ್ಷದ ಒಳ್ಳೆ ಹೆಜ್ಜೆ ಇದು. ಇನ್ಮೇಲೆ ಪ್ರಜೆಗಳು ಪದೇ ಪದೇ ಬೆಲೆ ಕಡಿಮೆ ಮಾಡ್ಸ್ಕೊಂತಾರೆ ಬಿಡಿ ಎಂದು ಕಮೆಂಟ್ ಮಾಡಿದ್ದಾರೆ.
ಸಂತೋಷ ಕೊಡುವ ಉಡುಗೊರೆ ಅಲ್ಲ:
''ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ. ಇಷ್ಟೂ ದಿನ ಬಿಜೆಪಿ ಸರ್ಕಾರ ಕೇಂದ್ರದಲ್ಲೇ ಆಗಲಿ, ರಾಜ್ಯದಲ್ಲೇ ಆಗಲಿ ಎಲ್ಲಾ ರೀತಿಯ ಇಂಧನಗಳ ಬೆಲೆಯನ್ನ ಮನಸೋ ಇಚ್ಛೆ ಏರಿಕೆ ಮಾಡಿದಾಗ ಬಾಯಿ ಬಿಡದೆ ಬೀಗ ಜಡಿದಿದ್ದ ಎಲ್ಲಾ ವೀರ ಪುರುಷರು ಇಂದು 5 ರೂ.ಕಡಿಮೆ ಮಾಡಿದ್ದಕ್ಕೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ '' ಎಂದು ನೆಟ್ಟಿಗರು ಬಿಜೆಪಿ ಬೆಂಬಲಿಗರ ಕಾಲೆಳೆದಿದ್ದಾರೆ.
''ಇದೇನು ಅಷ್ಟೇನು ಸಂತೋಷ ಕೊಡುವ ಉಡುಗೊರೆ ಅಲ್ಲ. ಇದು ಇನ್ನೂ ಕಡಿಮೆ ಅಂದರೆ 75 ಮತ್ತು 60 ಇಳಿಸಿ ಉಡುಗೊರೆ ಅಂಥ ಹೇಳಿದರೆ ಸಂತೋಷ ಪಡುವ ವಿಷಯ. ಆದಾಯವನ್ನೇ ನೋಡುವುದು ಬಿಟ್ಟು ಜನಸಾಮಾನ್ಯರ ಕಷ್ಟದ ಮನಸ್ಥಿತಿಯನ್ನು ಅರಿಯುವ ಜನನಾಯಕ ಬೇಕು'' ಎಂದು ತೈಲ ದರ ಇಳಿಕೆಯ ಪ್ರಮಾಣವನ್ನು ಟೀಕಿಸಿದ್ದಾರೆ.
''ಚುನಾವಣೆಯಲ್ಲಿ ಮತದಾರ ಮಾಡಿದ ಮ್ಯಾಜಿಕ್ನಿಂದ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 5 ರೂ, 10 ರೂ.ನಷ್ಟು ಕಡಿತಗೊಳಿಸಿದೆ. 40 ರೂ. ಹೆಚ್ಚು ಮಾಡಿ, 5 ರೂ.ಕಡಿಮೆ ಮಾಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದಗಳು. ಬಿಜೆಪಿ ಸೋತಂಗೆಲ್ಲ ಜನರಿಗೆ ಬಂಪರ್. ಹ್ಯಾಪಿ "ದಿವಾಳಿ" ಟು ಬಿಜೆಪಿ'' ಎಂದು ನೆಟ್ಟಿಗರು ಕೇಸರಿ ಪಡೆಯನ್ನು ಕುಟುಕಿದ್ದಾರೆ.
ಇದನ್ನೂ ಓದಿ:ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ತೈಲದ ಮೇಲೆ ತೆರಿಗೆ ಕಡಿತ.. ಯಾವ ರಾಜ್ಯದಲ್ಲಿ ಎಷ್ಟು ಇಳಿಕೆ?