ಬೆಂಗಳೂರು: ಹೊರ ರಾಜ್ಯದ ಕಾರುಗಳಿಗೆ ತೆರಿಗೆ ಕಟ್ಟಿಸಿಕೊಳ್ಳದೇ ನಕಲಿ ದಾಖಲಾತಿ ಸೃಷ್ಟಿಸಿ ರಾಜ್ಯದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಮಾಡಿ ಅಕ್ರಮ ಎಸಗುತ್ತಿದ್ದ ಜಾಲವನ್ನು ಸಿಸಿಬಿ ಬಯಲಿಗೆಳೆದಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಹೊಸೂರು ಮೂಲದ ಗಿರೀಶ್ ಬಂಧಿತ ಆರೋಪಿ. ಸಾರಿಗೆ ಇಲಾಖೆಗೆ ಸ್ಮಾರ್ಟ್ ಕಾರ್ಡ್ ಹಾಗೂ ಇನ್ನಿತರ ಕಾರ್ಡ್ ಪೂರೈಸುವ ಜವಾಬ್ದಾರಿ ವಹಿಸಿಕೊಂಡಿದ್ದ. ರೋಸ್‌ಮೆರ್ಟಾ ಎಂಬ ಕಂಪನಿ ತೆರೆದಿದ್ದ. ತಾಂತ್ರಿಕ ತಜ್ಞನಾಗಿದ್ದು, ಇಲಾಖೆಯು ನೀಡಿದ್ದ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಪಡೆದಿದ್ದ.
ಈ ಕೆಲಸಕ್ಕಾಗಿ ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಮೂಲದ ನಾಲ್ವರು ಇಂಜಿನಿಯರ್ ಪದವೀಧರರನ್ನು ನಿಯೋಜಿಸಿದ್ದ. ಇಲಾಖೆಯು ನೀಡಿದ್ದ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಮೂಲಕ ವೆಬ್ ಸೈಟ್ ಹ್ಯಾಕ್ ಮಾಡಿ ಅಕ್ರಮ ಎಸಗುತ್ತಿದ್ದ. ಈ ಸಂಬಂಧ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ದೂರು ನೀಡಿದ ಮೇರೆಗೆ ಆರೋಪಿಯನ್ನು ಸಿಸಿಬಿ ಬಂಧಿಸಿದೆ.
ದುಬಾರಿ ಕಾರುಗಳೇ ಈತನ ಟಾರ್ಗೆಟ್:
ಬೆನ್ಸ್, ಬಿಡಬ್ಲ್ಯೂ, ಜಾಗ್ವಾರ್ ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ 15ಕ್ಕೂ ಹೆಚ್ಚು ಹೊರ ರಾಜ್ಯದ ಕಾರುಗಳ ನೋಂದಣಿ ವೇಳೆ ಅಕ್ರಮ ಎಸಗಿ, ಕಾರುಗಳಿಗೆ ನಕಲಿ ಸಂಖ್ಯೆ ನೀಡುತ್ತಿದ್ದನಂತೆ. ಈ ಪ್ರಕ್ರಿಯೆ ಆಧರಿಸಿ ವಾಹನ ಮಾಲೀಕರಿಂದ ಯಾವುದೇ ತೆರಿಗೆ ಕಟ್ಟಿಸಿಕೊಳ್ಳದೇ ಕೆಎ ನೋಂದಣಿ ಮಾಡಿಸಿಕೊಳ್ಳುತ್ತಿದ್ದ. ಸರ್ಕಾರ ನಿಗದಿಪಡಿಸಿದ ಹಣವನ್ನು ಆರ್ಟಿಒಗೆ ಪಾವತಿಸದೇ ವಂಚಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಈ ದಂಧೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ, ಎಷ್ಟು ಹಣ ಸರ್ಕಾರಕ್ಕೆ ವಂಚಿಸಿದ್ದಾನೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ 10 ದಿನಗಳ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.