ಬೆಂಗಳೂರು:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಅಳವಡಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಈ ಕುರಿತು ಬೆಂಗಳೂರಿನ ಜೆ. ಜಗನ್ ಕುಮಾರ್, ವಿ. ಪರಮೇಶ್ ಎಂಬುವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿದಾರರ ಕೋರಿಕೆ: ದೇಶದ ಮಹಾನ್ ವ್ಯಕ್ತಿಗಳಲ್ಲಿ ಅಂಬೇಡ್ಕರ್ ಕೂಡ ಒಬ್ಬರು. ಸಂವಿಧಾನ ರಚನಾ ಕರಡು ಸಮಿತಿ ಅಧ್ಯಕ್ಷರಾಗಿದ್ದವರು. ಸ್ವತಂತ್ರ ಭಾರತದ ಪ್ರಥಮ ಕೇಂದ್ರ ಕಾನೂನು ಸಚಿವರು. 1920ರಿಂದಲೂ ಸಂವಿಧಾನ ರಚನೆಯಲ್ಲಿ ಅವರು ನಿರ್ವಹಿಸುತ್ತಾ ಬಂದ ಪಾತ್ರ ಮಹತ್ತರವಾದದ್ದು. ಅವರ ಸಂಘಟನೆ ಮತ್ತು ನಾಯಕತ್ವದ ಕೌಶಲ್ಯಕ್ಕೆ ಸಾಟಿಯಿಲ್ಲ. 1990ರಲ್ಲಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆದರೆ ಗಾಂಧೀಜಿ ಅವರಿಗೆ ದೊರೆತ ಪ್ರಾಧಾನ್ಯತೆ ಅಂಬೇಡ್ಕರ್ ಅವರಿಗೆ ಲಭಿಸಿಲ್ಲ.