ಬೆಂಗಳೂರು: ಉಪ ಚುನಾವಣೆ ನಡೆಯಲಿರುವ ಬೆಂಗಳೂರಿನ 4 ಕ್ಷೇತ್ರಗಳಲ್ಲಿ ಚುನಾವಣಾ ಸಿದ್ಧತೆ ಆರಂಭಗೊಂಡಿದ್ದು, ಇಂದಿನಿಂದ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಈ ಬಗ್ಗೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯಾಗಿರುವ, ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು.
ಈ ಬಾರಿಯೂ ಉಪ ಚುನಾವಣೆಯಲ್ಲಿ ಇವಿಎಂ ಜೊತೆ ವಿವಿ ಪ್ಯಾಟ್ ಕಡ್ಡಾಯವಾಗಿದ್ದು, ಬೆಂಗಳೂರಿನ ಆಯಾ ವಿಧಾನಸಭಾ ಕ್ಷೇತ್ರಗಳ ಭದ್ರತಾ ಕೊಠಡಿಯಲ್ಲೇ ಇವಿಎಂ ಇಡಲಾಗಿದೆ. ಮಾದರಿ ನೀತಿ ಸಂಹಿತೆ ಇಂದಿನಿಂದ ಡಿ 11ರವರೆಗೆ ಜಾರಿಯಿರಲಿದೆ. ಪ್ರತಿ ಮತಗಟ್ಟೆಗೆ 1 ಅಧ್ಯಕ್ಷಾಧಿಕಾರಿ, 3 ಜನ ಮತಗಟ್ಟೆ ಅಧಿಕಾರಿ ನೇಮಕವಾಗಿದ್ದು, 4 ಕ್ಷೇತ್ರಗಳಿಗೆ ಒಟ್ಟು 5988 ಚುನಾವಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೈಕ್ರೋ ಅಬ್ಸವರ್ಗಳನ್ನೂ ಮತದಾನ ಪ್ರಕ್ರಿಯೆಗೆ ನಿಯೋಜನೆ ಮಾಡಲಾಗಿದ್ದು, ಚುನಾವಣಾ ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ಸ್ ಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.
ಉಪಚುನಾವಣೆ ದೂರುಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಲಾಗಿದ್ದು, ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ರೂ 08022975561 / 8884118033 ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಇನ್ನು ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿ ಜೊತೆಯೂ ಸಭೆಯೂ ನಡೆಸಲಾಗುವುದು ಎಂದರು.