ಬೆಂಗಳೂರು: ನಗರ ಪ್ರದೇಶಗಳಲ್ಲಿರುವ ಕೊಳೆಗೇರಿಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಹಾಗೂ ಈ ಪ್ರದೇಶಗಳಲ್ಲಿ ಸೋಂಕು ತಡೆಗೆ ಯೋಜನೆ ರೂಪಿಸಿ ಎಂದು ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿದೆ.
ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೊಜಾರಿಯೋ ಮಾಹಿತಿ ನೀಡಿ, ನಗರದಲ್ಲಿ ಒಂದುು ಸಾವಿರಕ್ಕೂ ಅಧಿಕ ಕೊಳೆಗೇರಿಗಳಿವೆ. ನಗರದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಇರುವುದು ಕೂಡ ಇವೇ ಪ್ರದೇಶಗಳಲ್ಲಿ. ಹೀಗಾಗಿ ಇಲ್ಲಿ ಸೋಂಕು ಶೀಘ್ರವಾಗಿ ವ್ಯಾಪಿಸುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಹಾಗೂ ಸೋಂಕು ನಿಯಂತ್ರಣ ಮಾಡಲು ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.
ಕೋರಿಕೆ ಪರಿಗಣಿಸಿದ ಪೀಠ, ಕೊಳೆಗೇರಿ ಪ್ರದೇಶಗಳಲ್ಲಿ ಸೋಂಕು ವ್ಯಾಪಿಸದಂತೆ ಬಿಬಿಎಂಪಿ ಕೂಡಲೇ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಈ ಪ್ರದೇಶಗಳಲ್ಲಿ ಸೋಂಕು ಹರಡದಂತೆ ತಡೆಯಲು ಪ್ರತ್ಯೇಕ ಯೋಜನೆ ರೂಪಿಸಿ, ಜಾರಿಗೊಳಿಸಬೇಕು. ಅದನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಲ್ಲದೇ ಈ ಭಾಗಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿತು