ಕರ್ನಾಟಕ

karnataka

ETV Bharat / city

ಪೊಲೀಸರು ಖಾಕಿ ಕಳಚಿ, ಬಿಜೆಪಿ ಡ್ರೆಸ್ ಹಾಕಿಕೊಳ್ಳಿ.. ಜೈಲು-ಬೇಲು ನಮ್ಗೇನು ಹೊಸದಲ್ಲ, ನಡೆದೇ ಜೈಲಿಗೆ ಹೋಗ್ತೀವಿ : ಡಿಕೆಶಿ

ಕೆಂಗೇರಿಯ ಪೂರ್ಣಿಮಾ ಪ್ಯಾಲೆಸ್​ನಲ್ಲಿ ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು..

dk shivakumar speaks on mekedatu padayatra
ಮೇಕೆದಾಟು ಪಾದಯಾತ್ರೆ ಕುರಿತು ಡಿಕೆಶಿ ಮಾತನಾಡಿರುವುದು

By

Published : Mar 1, 2022, 11:56 AM IST

Updated : Mar 1, 2022, 12:35 PM IST

ಬೆಂಗಳೂರು: ಜೈಲು ಮತ್ತು ಬೇಲು ನಮಗೇನು ಹೊಸದಲ್ಲ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನರ ಬದುಕಿಗೆ ನಾವು ಹೋರಾಟ (ಮೇಕೆದಾಟು ಪಾದಯಾತ್ರೆ) ಮಾಡುತ್ತಿದ್ದೇವೆ.

ಉಕ್ರೇನ್ ವಿಚಾರ ಇಲ್ಲದ್ದಿದ್ರೆ ಮಾಧ್ಯಮದವರು ಕೂಡ ಪಾದಯಾತ್ರೆ ಸಂಬಂಧ ಹೆಚ್ಚು ಪ್ರಚಾರ ಕೊಡುತ್ತಿದ್ದರು. ನಮ್ಮ ಮೊದಲನೇ ಮೇಕೆದಾಟು ಪಾದಯಾತ್ರೆಗೆ ಸಹಕಾರ ಇತ್ತು ಎಂದು ತಿಳಿಸಿದರು. ರಾಜ್ಯದಲ್ಲಿ ಎಲ್ಲರಿಗೂ ಒಂದೇ ಕಾನೂನು.

ಆದ್ರೆ, ನಮ್ಮ ಫ್ಲೆಕ್ಸ್, ಬ್ಯಾನರ್​​ಗಳನ್ನು ರಾತ್ರಿ ಹೊತ್ತು ತೆಗೆಸಿದ್ದಾರೆ. ಯಡಿಯೂರಪ್ಪ ಅವರ ಹುಟ್ಟುಹಬ್ಬ, ಸಚಿವ ಅಶ್ವತ್ಥ್ ನಾರಾಯಣ ಹುಟ್ಟುಹಬ್ಬ, ಸಚಿವ ಸೋಮಣ್ಣ ಹುಟ್ಟುಹಬ್ಬ, ಶಿವರಾತ್ರಿ ಹಬ್ಬದ ಬೋರ್ಡ್ ಹಾಕಿಸಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬಿಬಿಎಂಪಿ ಆಯುಕ್ತರ ವಿರುದ್ಧ ಆಕ್ರೋಶ :ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಮೇಲೆ ಗರಂ ಆದ ಡಿಕೆಶಿ, ನೀವು ಬಿಬಿಎಂಪಿ ಕಚೇರಿ ಬದಲು ಬಿಜೆಪಿ ಪಾರ್ಟಿ ಅಂತಾ ಬೋರ್ಡ್ ಹಾಕಿಕೊಳ್ಳಿ. ಕಾನೂನು ಎಲ್ಲರಿಗೂ ಒಂದೇ ಇರಬೇಕು ಎಂದರು.

ಡಿಕೆಶಿ ಕ್ಷಮೆಯಾಚನೆ : ಇವತ್ತಿನಿಂದ ಬೆಂಗಳೂರಿನಲ್ಲಿ ಮೂರು ದಿನ ಪಾದಯಾತ್ರೆ ಮಾಡುತ್ತಿದ್ದೇವೆ. ಬೆಂಗಳೂರು ಜನರಿಗೆ ನಾನು ಕ್ಷಮೆ ಕೇಳುತ್ತೇನೆ. ಟ್ರಾಫಿಕ್ ಹೆಚ್ಚು ಆಗಲಿದೆ. ನಿಮಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಮುಂದಿನ ಮೂವತ್ತು ವರ್ಷಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.

ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲು : ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆ 37 ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾವು ಪಾದಯಾತ್ರೆ ಮಾಡುತ್ತಿರುವುದು ಸಿಎಂ ಬೊಮ್ಮಾಯಿ, ಅಧಿಕಾರಿಗಳಿಗೂ ಗೊತ್ತು. ಅವರ ಅನುಮತಿ ಪಡೆದು ಪಾದಯಾತ್ರೆ ಆರಂಭಿಸಿದ್ದೇವೆ. ಆದ್ರೆ, ಈಗ ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲು ಮಾಡಿದ್ದಾರೆ ಎಂದರು.

ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಪಕ್ಷದ ಪಾದಯಾತ್ರೆ

ನಡೆದುಕೊಂಡೇ ಜೈಲಿಗೆ ಹೋಗ್ತೀವಿ : ಬೆಂಗಳೂರಿನಲ್ಲಿ ಫ್ಲೆಕ್ಸ್ ತೆಗೆಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಮನೆಯ ರಸ್ತೆಯಿಂದ ವಿಧಾನಸೌಧದವರೆಗೂ ಇವರ ಫ್ಲೆಕ್ಸ್ ನೋಡಿದ್ದೇನೆ. ಮೊನ್ನೆ ಮಿನಿಸ್ಟರ್ ಮತ್ತು ಸಂಸದ ರಾಘವೇಂದ್ರ ಶಿವಮೊಗ್ಗದಲ್ಲಿ ಮೆರವಣಿಗೆ ಮಾಡಿದ್ರು. ಬಜರಂಗದಳದವರು ಬೀದಿಗಿಳಿದು ಪ್ರತಿಭಟಿಸಿದ್ರು. ಯಾರ ಮೇಲೂ ಕೇಸ್ ಹಾಕಿಲ್ಲ. ನಾವು ಜನರ ಪರ ಹೋರಾಟ ಮಾಡಿದ್ರೆ ಕೇಸ್ ಹಾಕಿದ್ದಾರೆ. ಕೇಸ್ ಹಾಕ್ಲಿ ನಡೆದುಕೊಂಡೇ ಜೈಲಿಗೆ ಹೋಗ್ತೀವಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅನ್ನು ನೀವು ಸಾಯಿಸಬಹುದು. ಆದ್ರೆ, ನಾನು ಮತ್ತು ಸಿದ್ದರಾಮಯ್ಯ ಅಂಥವರು ನೂರಾರು ಜನ ಹುಟ್ಟುತ್ತಾರೆ. ಎಫ್ಐಆರ್‌ಗೆ ನಾವು ಹೆದರಲ್ಲ. ನಮ್ಮದು ಗಾಂಧಿ ತತ್ವ ಎಂದರು.

ಪಾದಯಾತ್ರೆಗೆ ಆಹ್ವಾನ :ಟೀಕೆಗಳನ್ನು ಉಪದೇಶ ಅಂತಾ ಸಂತೋಷದಿಂದ ಸ್ವಾಗತ ಮಾಡ್ತಿದ್ದೇವೆ. 5 ದಿನ ಕಾರ್ಯಕ್ರಮವಿತ್ತು. ಆದ್ರೆ, ಸಿಎಂ ಶುಕ್ರವಾರ ಬಜೆಟ್ ಎಂದು ತಿಳಿಸಿದ್ದಾರೆ. ಹೀಗಾಗಿ, ಬಜೆಟ್​ಗೂ ತೊಂದರೆಯಾಗಬಾರದು, ಜನರಿಗೂ ತೊಂದರೆಯಾಗಬಾರದು ಅಂತಾ ಬೆಂಗಳೂರಿನಲ್ಲಿ 3 ದಿನ ಪಾದಯಾತ್ರೆ ಮಾಡಲಾಗುತ್ತಿದೆ. ಕಾರ್ಯಕರ್ತರು ಮೆಟ್ರೋ ಬಳಸಿಕೊಂಡು ನ್ಯಾಷನಲ್ ಕಾಲೇಜ್ ಗ್ರೌಂಡ್​ನ ಬಹಿರಂಗ ಸಭೆಗೆ ಬರಬೇಕು.

ಮುರುಘಾ ಶ್ರೀಗಳು ಸೇರಿದಂತೆ ಕೆಲ ಸ್ವಾಮೀಜಿಗಳು ಸಹಕಾರ ಕೊಟ್ಟಿದ್ದಾರೆ. 2 ದಿನ ಆದಿಚುಂಚನಗಿರಿ ಮಠದಲ್ಲೇ ವಾಸ್ತವ್ಯವಿದ್ದೆ. ರಾಜ್ಯದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲ ವ್ಯಕ್ತಪಡಿಸುವ ಎಲ್ಲರೂ ನಾಡಿದ್ದು ಹೆಜ್ಜೆ ಹಾಕಬಹುದು. ಎಲ್ಲರಿಗೂ ಆಹ್ವಾನ ಕೊಡುತ್ತೇವೆ. 3ರಂದು ಬೃಹತ್ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಎಲ್ಲರಿಗೂ ಮನವಿ ಮಾಡುತ್ತೇವೆ. ಶಿವನಲ್ಲಿ ಪ್ರಾರ್ಥಿಸಿ, ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭ ಕೋರುತ್ತೇನೆ ಎಂದರು.

ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಪಕ್ಷದ ಪಾದಯಾತ್ರೆ

ರಾಜ್ಯದ ಮುಖ್ಯಮಂತ್ರಿಗಳು ಕುಡಿಯುವ ನೀರಿನ ಯೋಜನೆಗೆ ಯಾರ ಪರ್ಮಿಷನ್ ಬೇಡ ಅಂತಾ ಹೇಳಿದ್ದಾರೆ. ಪಾದಯಾತ್ರೆ ಮಾಡುವುದರಿಂದ ನಮಗೆ ಅಡ್ಡಿಯಿಲ್ಲ ಅಂತಾ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಗೋವಿಂದ ಕಾರಜೋಳಗೆ ಇದು ಗೊತ್ತಿಲ್ವಾ? ಶಿವಮೊಗ್ಗದಲ್ಲಿ ಮೆರವಣಿಗೆ ಮಾಡಿದ್ರು, ಸಿಎಂ ಕಾರ್ಯಕ್ರಮ ಮಾಡ್ತಾರೆ, ಇದಕ್ಕೆ ಕೊರೊನಾ ನಿಯಮ ಇಲ್ವಾ? ಜೈಲಿಗೆ, ಬೇಲ್​ಗೆ ನಾವು ಹೆದರುವವರಲ್ಲ. ಪೊಲೀಸ್​ನವರು ಖಾಕಿ ತೆಗೆದು ಬಿಜೆಪಿ ಡ್ರೆಸ್ ಇದ್ರೆ ಹಾಕಿಕೊಳ್ಳಿ ಎಂದು ಕಿಡಿಕಾರಿದರು. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಅಧಿಕಾರ ಶಾಶ್ವತವಲ್ಲ. ಪೊಲೀಸ್ ಅಧಿಕಾರಿಗಳು ಏನ್ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ ಎಂದರು.

ಇದನ್ನೂ ಓದಿ:ಬೆಂಗಳೂರು ಜನತೆಯ ಕ್ಷಮೆ ಯಾಚಿಸಿದ ಡಿಕೆಶಿ... ಯಾಕೆ ಗೊತ್ತಾ?

ಹರ್ಷನ ಮನೆಗೆ ಕಾಂಗ್ರೆಸ್ ನಾಯಕರು ಹೋಗಿಲ್ಲವೆನ್ನುವ ವಿಚಾರವಾಗಿ ಮಾತನಾಡಿ, ನಮ್ಮ ಜಿಲ್ಲಾ ಕಾಂಗ್ರೆಸ್ ನಾಯಕರು ಹೋಗಿ ಬಂದಿದ್ದಾರೆ. ಪಾದಯಾತ್ರೆ ಮುಗಿದ ಮೇಲೆ ನಾನು ಹೋಗ್ತೇನೆ. ನಮ್ಮ ಹುಡುಗ, ನಮ್ಮ ಯುವಕ ಆತ. ಯಾರೂ ಕೂಡ ಯಾರನ್ನೂ ಸಾಯಿಸಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಉಪಸ್ಥಿತರಿದ್ದರು.

ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಪಕ್ಷದ ಪಾದಯಾತ್ರೆ:
ಬೆಂಗಳೂರಿನ ಕೆಂಗೇರಿ ಪೂರ್ಣಿಮ ಸಮುದಾಯಭವನದಿಂದ ಆರಂಭವಾಗಿರುವ ಪಾದಯಾತ್ರೆ ನಾಯಂಡಹಳ್ಳಿ ಹೊಸಕೆರೆಹಳ್ಳಿ ಮಾರ್ಗವಾಗಿ ಸಾಗಿ ಬನಶಂಕರಿ ಮೂಲಕ ಬಿಟಿಎಂ ಬಡಾವಣೆ ತಲುಪಲಿದೆ. ಸುದ್ದಿಗೋಷ್ಠಿ ನಡೆಸಿದ ಬಳಿಕ ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ ನಾಯಕರು ನೂರಾರು ಸಂಖ್ಯೆಯ ಕಾರ್ಯಕರ್ತರ ಬೆಂಬಲದೊಂದಿಗೆ ಮುಂದೆ ಸಾಗಿದ್ದಾರೆ. ಪೊಲೀಸರ ಸರ್ಪಗಾವಲಿನಲ್ಲಿ ಪಾದಯಾತ್ರೆ ಆರಂಭವಾಗಿದೆ.

ಸಾಂಸ್ಕೃತಿಕ ಕಲಾ ತಂಡಗಳ ವೈಭವ ಹಾಗೂ ಅಲ್ಲಲ್ಲಿ ನಾಯಕರಿಗೆ ಹಾರ ಹಾಕಿ ಸ್ವಾಗತ ಕೋರಲು ಕಾರ್ಯಕರ್ತರು ಆಯೋಜಿಸಿದ ಸಮಾರಂಭಗಳು ಗಮನಸೆಳೆದವು. ಮೈಸೂರು ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆ ವೇಳೆ ಅಲ್ಲಲ್ಲಿ ಕಾರ್ಯಕರ್ತರು ನೀರು, ಮಜ್ಜಿಗೆ, ತಂಪು ಪಾನೀಯ ಪೂರೈಸುತ್ತಿದ್ದರು.

Last Updated : Mar 1, 2022, 12:35 PM IST

ABOUT THE AUTHOR

...view details