ಬೆಂಗಳೂರು : ರಾಜ್ಯದಲ್ಲಿ ಸುಮಾರು 4 ಲಕ್ಷ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‍ಗಳಿಗೆ ಮಂಜೂರಾತಿ ನೀಡಲಾಗಿದ್ದು, ಇವುಗಳನ್ನು ಗ್ರಾಮ ಒನ್ ಕೇಂದ್ರಗಳ ಮೂಲಕ ವಿತರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗ್ರಾಮ ಒನ್ ಯೋಜನೆಯ ಪ್ರಗತಿ ಕುರಿತು ಜಿಲ್ಲಾಡಳಿತ ಹಾಗೂ ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್ಗಳೊಂದಿಗೆ ಇಂದು ನಡೆದ ವಿಡಿಯೋ ಸಂವಾದದಲ್ಲಿ, ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಸರ್ಕಾರ ತನ್ನ ಅಧಿಕಾರ ಮತ್ತು ಜವಾಬ್ದಾರಿಯನ್ನು ಆಪರೇಟರ್ಸ್ಗಳಿಗೆ ವಹಿಸಲಾಗಿದೆ. ಜನರ ಬಳಿ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ನೀಡಬೇಕೆಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.
ಕಚೇರಿಗೆ ಜನರ ಅಲೆದಾಟ ತಪ್ಪಿಸಿ : ಜನರ ಎಲ್ಲ ಮಾಹಿತಿಗಳು ಕಾಗದರೂಪದಲ್ಲಿಯೇ ಪಡೆಯುವ ಅವಶ್ಯಕತೆಯಿಲ್ಲ. ಕುಟುಂಬ ಜನಸೇವಕ ಸಾಫ್ಟ್ವೇರ್ನಲ್ಲಿಯೂ ಮಾಹಿತಿಗಳು ಲಭಿಸುತ್ತವೆ. ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ತ್ವರಿತವಾಗಿ ಸರ್ಕಾರದ ಸೇವೆಯನ್ನು ಪೂರೈಸಬೇಕು.
ಮಾಹಿತಿ ಕೊರತೆ ಇದ್ದರೆ ಸ್ಪಷ್ಟೀಕರಣ ನೀಡಬೇಕು. ಸೇವೆ ಪೂರೈಸಲು ಕಾನೂನಾತ್ಮಕವಾಗಿ ಸಾಧ್ಯವಾಗದಿದ್ದಲ್ಲಿ ಅರ್ಜಿಯ ತಿರಸ್ಕಾರಕ್ಕೆ ಸಕಾರಣವನ್ನು ನೀಡಬೇಕು. ತಿರಸ್ಕೃತ ಅರ್ಜಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಹಶೀಲ್ದಾರ್ ಸಿಬ್ಬಂದಿಗಳೊಂದಿಗೆ ಸೌಹಾರ್ದತೆಯಿಂದಿರಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಗೆ ಮೀರಿದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡುವ ಅರಿವು ಇರಬೇಕು ಎಂದು ತಿಳಿಸಿದರು.