ಕರ್ನಾಟಕ

karnataka

ಚುನಾವಣೆಗೆ ಸ್ಪರ್ಧಿಸಲು ಅನರ್ಹರಿಗೆ ಅವಕಾಶ: ಎಲ್ಲರ ಚಿತ್ತ ಸಿಎಂರತ್ತ..!

By

Published : Nov 13, 2019, 12:37 PM IST

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಅಸಮಾಧಾನವನ್ನು ಬಳಸಿಕೊಂಡು ಕೇಸರಿ ನಾಯಕರು ಪರೋಕ್ಷವಾಗಿ ನಡೆಸಿದ ಆಪರೇಷನ್, 17 ಶಾಸಕರ ರಾಜೀನಾಮೆ ಮೂಲಕ ಸಕ್ಸಸ್ ಆಯಿತು. ರಾಜ್ಯದಲ್ಲಿ ಕೇಸರಿ ಪಕ್ಷದ ಸರ್ಕಾರವೂ ರಚನೆಯಾಯಿತು. ಇದೀಗ ಸರ್ಕಾರ ರಚನೆಗೆ ಕಾರಣರಾದವರ ಸ್ಪರ್ಧೆಗೆ ಸುಪ್ರೀಂ ಗ್ರೀನ್ ಸಿಗ್ನಲ್ ನೀಡಿದ್ದು ಎಲ್ಲರ ಚಿತ್ತ ಇದೀಗ ಸಿಎಂ ನಿರ್ಧಾರತ್ತ ನೆಟ್ಟಿದೆ.

ಸಿಎಂ ಯಡಿಯೂರಪ್ಪ

ಬೆಂಗಳೂರು: ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಅನರ್ಹ ಶಾಸಕರ ಬಗ್ಗೆ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿದೆ. ಅದರ ಜೊತೆಗೆ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಈ ಹಿನ್ನೆಲೆ ಎಲ್ಲರ ಚಿತ್ತ ಈಗ ರಾಜ್ಯದ ಸಿಎಂ ಯಡಿಯೂರಪ್ಪರತ್ತ ನೆಟ್ಟಿದೆ.

ಈ ಹಿಂದೆತೀನ್ ದಿನ್ ಕಾ ಸಿಎಂ ಎನ್ನುವಂತಾದ ಬಿ.ಎಸ್.ಯಡಿಯೂರಪ್ಪ ನೇರವಾಗಿ ನಡೆಸಿದ ಮೊದಲ ಆಪರೇಷನ್ ಕಮಲ ಆರಂಭದಲ್ಲೇ ವೈಫಲ್ಯ ಕಂಡಿತು. ಬಿ.ಸಿ. ಪಾಟೀಲ್ ಜೊತೆ ಸಿಎಂ ಬಿಎಸ್​ವೈ ಮಾತನಾಡಿದ ಆಡಿಯೋ ರಿಲೀಸ್ ಆಗಿ ರಾಜ್ಯ ರಾಜಕಾರಣದಲ್ಲಿ ಕೋಲಾಹಲವೇ ಸೃಷ್ಟಿಯಾಯಿತು. ಕೊನೆಗೆ ಆಪರೇಷನ್ ಬಿಟ್ಟು ಬಿಎಸ್​ವೈ ರಾಜೀನಾಮೆ ನೀಡುವಂತಾಯಿತು. ಎರಡನೇ ಪ್ರಯತ್ನ ಕೂಡ ಆಡಿಯೋ ರಿಲೀಸ್​ನಿಂದಾಗಿಯೇ ವಿಫಲವಾಯಿತು. ಜೆಡಿಎಸ್ ಶಾಸಕರ ಪುತ್ರನೇ ಆಡಿಯೋ ಬಹಿರಂಗ ಮಾಡಿದ್ದು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಹೆಸರೂ ಪ್ರಸ್ತಾಪವಾಗಿದ್ದರಿಂದ ಭಾರೀ‌ ವಿವಾದಕ್ಕೆ ಕಾರಣವಾಗಿತ್ತು. ತನಿಖೆಗೆ ಸದನ ಸಮಿತಿ ರಚನೆಯನ್ನು ಮಾಡಿ ಆಪರೇಷನ್ ಕಮಲಕ್ಕೆ ಫುಲ್‌ ಸ್ಟಾಪ್‌ ಇಡಲಾಗಿತ್ತು.

ಮತ್ತೊಂದು ಬೆಳವಣಿಗೆಯಲ್ಲಿ ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಮೂಲಕ‌ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಪ್ರಯತ್ನ ನಡೆಸಲಾಗಿತ್ತು. ಜಾರಕಿಹೊಳಿ ಜೊತೆ ಕೆಲ ರೆಬಲ್​ಗಳು ದೆಹಲಿಯ ಹೊರವಲಯದ ತಾರಾ ಹೋಟೆಲ್​ನಲ್ಲಿ ಬೀಡು ಬಿಟ್ಟು ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದ್ದರು. ಆಗಲೂ ಬಿ.ಎಸ್.ಯಡಿಯೂರಪ್ಪ ಸೇರಿ ರಾಜ್ಯದ ನಾಯಕರು ಬಹಿರಂಗ ಹೇಳಿಕೆ ನೀಡುವ ಮೂಲಕ ಆಪರೇಷನ್ ಕಮಲದ ಗೌಪ್ಯತೆ ಬಹಿರಂಗವಾಗುವಂತೆ ಮಾಡಿದ್ದರು. ಜೊತೆ ಸಂಖ್ಯಾಬಲದ‌ ಕೊರತೆ ಕೂಡ ಎದುರಾದ ನಂತರ ಜಾರಕಿಹೊಳಿ ತಂಡ ರಾಜ್ಯಕ್ಕೆ ಮರಳಿತ್ತು.

ಮೂರು ಬಾರಿ ಆಪರೇಷನ್ ವಿಫಲವಾದ ನಂತರ ಹೈಕಮಾಂಡ್ ನಾಯಕರು ಅಳೆದು ತೂಗಿ ಆಪರೇಷನ್ ಕಮಲದ ಗೌಪ್ಯ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದರು. ಆರ್.ಅಶೋಕ್ ಸೇರಿದಂತೆ‌‌ ದಕ್ಷಿಣ ಕರ್ನಾಟಕದ ನಾಯಕರಿಂದಲೇ ಆಪರೇಷನ್ ಕಮಲದ ಮಾಹಿತಿ ಸೋರಿಕೆ ಹಿನ್ನಲೆಯಲ್ಲಿ ಈ ಬಾರಿ ಸೀಕ್ರೆಟ್ ಆಗಿ ಆಪರೇಷನ್​ಗೆ ತಂತ್ರ ರೂಪಿಸಿತು.
ಯಾರೂ ಊಹಿಸದ‌ ರೀತಿ ಆಪರೇಷನ್ ಕಮಲದ ಕೋರ್ ಟೀಂ ರಚಿಸಿದ ಬಿಜೆಪಿ ನಾಯಕರು ಡಾ.ಅಶ್ವತ್ಥನಾರಾಯಣ್, ಲಕ್ಷ್ಮಣ ಸವದಿ, ಅರವಿಂದ ಲಿಂಬಾವಳಿ ಅವರಿಗೆ ಇಡೀ ಕಾರ್ಯಾಚರಣೆ ಉಸ್ತುವಾರಿ ವಹಿಸಿತ್ತು. ರಮೇಶ್ ಜಾರಕಿಹೊಳಿ ನೇತೃತ್ವದ ಅಸಮಾಧಾನಿತ ಶಾಸಕರ ಸಂಪರ್ಕ ಮಾಡಿ ನಿರಂತರ ಸಂಪರ್ಕದಲ್ಲಿ ಇದ್ದು ಪಕ್ಷ ಹಾಗೂ ಅಸಮಾಧಾನಿತ ಶಾಸಕರ ನಡುವೆ ಸಂಪರ್ಕದ ಕೊಂಡಿಯಾಗಿ ಕೆಲಸ ಮಾಡಿದರು.

ಡಾ.ಉಮೇಶ್ ಜಾಧವ್ ಪ್ರೇರಣೆ:

ಬಿಜೆಪಿಯ ಈ ಎಲ್ಲ ಕರಾಮತ್ತಿಗೆ ಸ್ಪೂರ್ತಿಯಾಗಿದ್ದು, ಡಾ.ಉಮೇಶ್ ಜಾಧವ್ ಪ್ರಕರಣ, ಚಿಂಚೋಳಿ ಕ್ಷೇತ್ರದಲ್ಲಿ ಜಾಧವ್​ ರಾಜೀನಾಮೆ ಕೊಡಿಸಿ ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಿದ ಬಿಜೆಪಿ, ಅವರನ್ನು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗೆಲ್ಲಿಸಿದ್ದು, ಅತೃಪ್ತ ಶಾಸಕರನ್ನು ಸೆಳೆಯುವುದಕ್ಕೆ ನೆರವಾಯಿತು. ಹೈಕಮಾಂಡ್ ಪ್ರತಿನಿಧಿಗಳ ಸಂಪರ್ಕದೊಂದಿಗೆ ಆಪರೇಷನ್ ಕೋರ್ ಟೀಂ ಅತೃಪ್ತರಿಗೆ ಅಭಯ ನೀಡಿ ರಾಜೀನಾಮೆ ಕೊಡಿಸುವ ತಂತ್ರ ರೂಪಿಸಿತು.

ಬಿಜೆಪಿ ಆಪರೇಷನ್ ಕೋರ್ ಟೀಂ ಭರವಸೆಯನ್ನು ಖಚಿತಪಡಿಸಿಕೊಂಡ ನಂತರವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಂಪರೆ ಆರಂಭಗೊಂಡಿತು. ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ಮೊದಲಿಗರಾಗಿ ರಾಜೀನಾಮೆ ನೀಡಿ ರಾಜೀನಾಮೆ ಸರಣಿಗೆ ಮುನ್ನುಡಿ‌ ಬರೆದರು. ಅದಾದ ನಂತರ ಜುಲೈ 6 ರಂದು ಕಾಂಗ್ರೆಸ್​ನ ರಾಮಲಿಂಗಾ ರೆಡ್ಡಿ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಪ್ರತಾಪ್ ಗೌಡ ಪಾಟೀಲ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು, ಶಿವರಾಂ ಹೆಬ್ಬಾರ್, ಬಿ.ಸಿ.ಪಾಟೀಲ್ ಹಾಗೂ ಜೆಡಿಎಸ್​ನ ಹೆಚ್.ವಿಶ್ವನಾಥ್, ನಾರಾಯಣ ಗೌಡ ಮತ್ತು ಗೋಪಾಲಯ್ಯ ಸಾಮೂಹಿಕವಾಗಿ ರಾಜೀನಾಮೆ ನೀಡಿ ರಾಮಲಿಂಗಾರೆಡ್ಡಿ ಹೊರತುಪಡಿಸಿ‌ ಮುಂಬೈಗೆ ಒಟ್ಟಿಗೆ ತೆರಳಿದರು. ನಂತರ ರೋಷನ್ ಬೇಗ್, ಬಳಿಕ ಸುಧಾಕರ್, ಎಂ.ಟಿ.ಬಿ. ನಾಗರಾಜ್ ಕೂಡ ಮುಂಬೈ ವಿಮಾನ ಏ‌ರಿದರು. ಅ‌ನರ್ಹರನ್ನು ಮುಂಬೈಗೆ ಕಳಿಸಲು ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಎಲ್ಲಾ ವ್ಯವಸ್ಥೆ ಮಾಡಿದ್ದರು ಎನ್ನುವುದು ಜಗಜ್ಜಾಹೀರಾಗಿತ್ತು.

ಇನ್ನು ಮಹಾರಾಷ್ಟ್ರ ಸರ್ಕಾರ ಅಲ್ಲಿನ ಹೋಟೆಲ್​ಗೆ ಭದ್ರತೆ ಕಲ್ಪಿಸಿ ಅತೃಪ್ತರ ಭೇಟಿಗೆ ಯಾರಿಗೂ ಅವಕಾಶ ನೀಡದೇ ಅತೃಪ್ತರನ್ನು ಸೇಫ್ ಮಾಡಿತು. ಡಿ.ಕೆ ಶಿವಕುಮಾರ್ ಸೇರಿ ಯಾವ ನಾಯಕರ ಭೇಟಿಗೂ ಅವಕಾಶ ನೀಡಲಿಲ್ಲ. ಆದರೆ ಬಿಜೆಪಿಯ ಅಶ್ವತ್ಥನಾರಾಯಣ್ ಹಾಗೂ ಅಶೋಕ್ ಮುಂಬೈಗೆ ತೆರಳಿ ಅದೇ ಅತೃಪ್ತ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಂತರ ಸ್ಪೀಕರ್​​ಗೆ ಖುದ್ದಾಗಿ ರಾಜೀನಾಮೆ ಪತ್ರ ಸಲ್ಲಿಸುವಂತೆ ಕೋರ್ಟ್ ನೀಡಿದ್ದ ಸೂಚನೆಯಂತೆ ಅನರ್ಹರೆಲ್ಲಾ ಒಟ್ಟಾಗಿ ಬಂದು ಸ್ಪೀಕರ್​ಗೆ ರಾಜೀನಾಮೆ ಪತ್ರ ಕೊಟ್ಟರು ಇದಕ್ಕೆ ಬಿಜೆಪಿ ವಿಮಾನದ ಜೊತೆಗೆ, ಪೊಲೀಸ್ ಭದ್ರತೆಯಲ್ಲಿ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿತ್ತು. ರಾಜೀನಾಮೆ ನೀಡಿದ ಶಾಸಕರು ನಂತರ ಮತ್ತೆ ಮುಂಬೈಗೆ ಹಿಂದಿರುಗಿದ್ದರು.

ಈ‌ ಎಲ್ಲಾ ಬೆಳವಣಿಗೆಗಳ ನಂತರ ಸ್ಪೀಕರ್ ರಮೇಶ್ ಕುಮಾರ್ 17 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ‌ ಆದೇಶ ಹೊರಡಿಸಿದ್ದರು. ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹರು‌ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಅನರ್ಹರಿಗೆ ಬಿಜೆಪಿ ಕಾನೂನು ನೆರವು ವಕೀಲರ ಸೌಲಭ್ಯ ಕಲ್ಪಿಸಿತ್ತು. ಅಟಾರ್ನಿ ಜನರಲ್ ಆಗಿದ್ದ ಮುಕುಲ್‌ ರೋಹ್ಟಗಿ ಅವರೇ ಅನರ್ಹರ ಪರ ವಕಾಲತ್ತು ವಹಿಸಿದ್ದರು.

ಇದೀಗ ಸುಪ್ರೀಂಕೋರ್ಟ್, ಅನರ್ಹ ಶಾಸಕರ ಬಗ್ಗೆ ಅಂದಿನ ಸ್ಪೀಕರ್ ರಮೇಶ್​ ಕುಮಾರ್ ನೀಡಿದ್ದ ತೀರ್ಪು ಎತ್ತಿಹಿಡಿದಿದೆ. ಜೊತೆಗೆ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಸಮ್ಮತಿಯನ್ನೂ ನೀಡಿದೆ. ಹೀಗಾಗಿ ಸರ್ಕಾರ ರಚಿಸಲು ಬಿಜೆಪಿಗೆ ನೆರವಾದ ಅನರ್ಹರಿಗೆ ಬಿಜೆಪಿ ಟಿಕೆಟ್ ನೀಡಬೇಕಾ ಅಥವಾ ಪಕ್ಷೇತರರಾಗಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರಬೇಕಾ ಎನ್ನುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರದ ಮೇಲೆ ನಿಂತಿದೆ.

ABOUT THE AUTHOR

...view details