ಬೆಂಗಳೂರು: ಆಡಳಿತ ಪಕ್ಷದ ಸದಸ್ಯರೊಬ್ಬರು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸದನದಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ, ತಮ್ಮ ಕ್ಷೇತ್ರದಲ್ಲಿ ಕೆರೆಗಳ ಅಭಿವೃದ್ಧಿ ಸೇರಿದಂತೆ ಹತ್ತು ರೂಪಾಯಿ ಕೆಲಸ ಆಗಿಲ್ಲ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಸಿದ್ದು ಸವದಿ ಅವರ ಆರೋಪಕ್ಕೆ ಅಸಮಾಧಾನಗೊಂಡ ಸಚಿವ ಮಾಧುಸ್ವಾಮಿ, ಶಾಸಕರ ಸೂಚನೆಯಂತೆಯೇ ತೇರದಾಳ ಕ್ಷೇತ್ರದಲ್ಲಿ ಕೆರೆಗಳ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಅಡ್ಡಿಯಿಂದಾಗಿ ಕೆಲವಡೆ ಕಾಮಗಾರಿ ಸಾಧ್ಯವಾಗುತ್ತಿಲ್ಲ. ಓಡಾಡಲು ಜಾಗವೇ ಕೊಡುವುದಿಲ್ಲ ಅಂದರೆ ಕಾಮಗಾರಿ ಹೇಗೆ ಮಾಡೋದು ಎಂದು ಸಿಡಿಮಿಡಿಗೊಂಡರು.
ಮತ್ತೊಬ್ಬ ಬಿಜೆಪಿ ಶಾಸಕರ ಎಚ್ಚರಿಕೆ: ಪ್ರಶ್ನೋತ್ತರ ವೇಳೆಯಲ್ಲಿ ಎತ್ತಿನಹೊಳೆ ಯೋಜನೆಯ ನೀರು ಕೃಷಿಗೆ ಕೊಡುತ್ತೇವೆಂದರೆ ಮಾತ್ರ ನಾವು ಯೋಜನೆಗೆ ಭೂಮಿ ಕೊಡುತ್ತೇವೆ. ಇಲ್ಲವಾದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಮಸಲಾ ಜಯರಾಮ್ ಎಚ್ಚರಿಕೆ ನೀಡಿದರು.
ಕೆರೆಗಳ ಅಭಿವೃದ್ಧಿ ಕುರಿತು ಚರ್ಚೆ ನನ್ನ ಕ್ಷೇತ್ರದ ರೈತರು ಎತ್ತಿನಹೊಳೆ ಯೋಜನೆಗೆ 52.28 ಎಕರೆ ಜಮೀನು ಕೊಟ್ಟಿದ್ದಾರೆ. ನಮ್ಮ ರೈತರ ಕೃಷಿ ಜಮೀನು ವಶಪಡಿಸಿಕೊಂಡಿದ್ದರೂ ಕೆರೆ ಕಟ್ಟೆಗಳಿಗೆ ಎತ್ತಿನಹೊಳೆ ನೀರು ಹಂಚಿಲ್ಲ. ತುರುವೇಕೆರೆಯನ್ನೂ ಎತ್ತಿನಹೊಳೆ ಯೋಜನೆಗೆ ಸೇರಿಸಿ ನೀರು ಕೊಡಿ ಎಂದು ಒತ್ತಾಯಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಒಂದು ಹನಿ ನೀರು ಇಲ್ಲದೆ ನಾವು ಬಯಲುಸೀಮೆಯ ಜನರು ಪರದಾಡುತ್ತಿದ್ದೇವೆ. ಬೆಂಗಳೂರಿನ ಜನ ತೊಳೆದುಕೊಂಡ ನೀರನ್ನಾದರೂ ಕೊಡಿ ಎಂದು ಅಂಗಲಾಚಿ ಪಡೆದುಕೊಳ್ಳುತ್ತಿದ್ದೇವೆ. ಹೀಗಿರುವಾಗ ಎತ್ತಿನಹೊಳೆ ಯೋಜನೆಗೆ ಹಲವಾರು ಕ್ಷೇತ್ರಗಳಿಂದ ವಾರಸುದಾರರು ಬಂದರೆ ಹೇಗೆ ಎಂದು ಪ್ರಶ್ನಿಸಿದರು.
ಎತ್ತಿನಹೊಳೆ ಮೂಲ ಯೋಜನೆಯಲ್ಲಿ ತುರುವೇಕೆರೆಯನ್ನು ಸೇರಿಸಲಾಗಿಲ್ಲ. ಹಾಗಾಗಿ ತುರುವೇಕೆರೆಗೆ ನೀರು ಕೊಡುವ ಪ್ರಶ್ನೆಯೇ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ನೀರು ಪೂರೈಸಿದ ನಂತರ ನೀರು ಉಳಿದಿದ್ದೇ ಆದರೆ ತುರುವೇಕೆರೆಗೆ ಪೂರೈಸಲು ಪರಿಶೀಲಿಸಲಾಗುವುದು ಎಂದು ಜಲಸಂಪಮ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪರವಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಉತ್ತರ ನೀಡಿದರು.