ಬೆಂಗಳೂರು :ರಾಜ್ಯ ಸರ್ಕಾರದ ಬೆಂಗಳೂರು ಲಾಕ್ಡೌನ್ ನಿರ್ಧಾರವನ್ನು ಸ್ವಾಗತಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಈ ಸಂದರ್ಭ ಸರ್ಕಾರ ಹಿಂದಿನ ಲಾಕ್ಡೌನ್ ವ್ಯರ್ಥ ಮಾಡಿಕೊಂಡ ರೀತಿ ಇದನ್ನೂ ಮಾಡಿಕೊಳ್ಳದಿರಲಿ ಎಂದು ಸಲಹೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬೆಂಗಳೂರು ಲಾಕ್ಡೌನ್ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಸಾಂಕ್ರಾಮಿಕ ರೋಗವನ್ನು ಪತ್ತೆಹಚ್ಚಲು, ಪರೀಕ್ಷಿಸಲು ಮತ್ತು ಸರಿಹೋಗಿಸಲು ಸರ್ಕಾರ ಹೆಣಗಾಡುತ್ತಿದೆ. ಇದ್ಯಾವ ವಿಚಾರದಲ್ಲೂ ನಿಯಂತ್ರಣ ಇಲ್ಲ. ಆಡಳಿತವು ವೈರಸ್‌ನ ಹರಡುವಿಕೆ ತಡೆಯಲು ಅಗತ್ಯ ಪರಿಣಾಮಕಾರಿ ಕ್ರಮಕೈಗೊಳ್ಳುವ ವಿಚಾರದಲ್ಲಿ ಕಳೆದ ಲಾಕ್ಡೌನ್ ವೇಳೆ ಸರಿಯಾದ ತಯಾರಿ ಮಾಡಿಕೊಳ್ಳದೆ ಅದನ್ನು ವ್ಯರ್ಥವಾಗಿಸಿತ್ತು. ಇದೂ ಆ ಹಾದಿ ತುಳಿಯದಿರಲಿ ಎಂದು ಹೇಳುತ್ತೇನೆ ಎಂದಿದ್ದಾರೆ.
ಈ ಲಾಕ್ಡೌನ್ ಅವಧಿಯಲ್ಲಿ ಆಸ್ಪತ್ರೆ ಹಾಸಿಗೆಗಳು, ವೆಂಟಿಲೇಟರ್‌ಗಳು, ಆ್ಯಂಬುಲೆನ್ಸ್ ಸೇವೆ, ಪರೀಕ್ಷೆ ಮತ್ತು ಪತ್ತೆಗಾಗಿ ಪ್ರೋಟೋಕಾಲ್‍ಗಳು, ಹೆಚ್ಚುವರಿ ವೈದ್ಯರು ಹಾಗೂ ಸಿಬ್ಬಂದಿ ಮತ್ತು ಸಂಗ್ರಹಣೆಯನ್ನು ಪ್ರಾರಂಭಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ಫಲಾನುಭವಿಗಳನ್ನು ತಲುಪಲು ಪರಿಹಾರ ಪ್ಯಾಕೇಜ್‌ಗಳನ್ನು ಸಂಪೂರ್ಣವಾಗಿ ಜಾರಿಗೆ ತರಬೇಕಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ಕೋವಿಡ್-19 ನಿಯಂತ್ರಣ ಮಾಡುತ್ತಿಲ್ಲ ಎಂದು ಪ್ರತಿಪಕ್ಷ ನಾಯಕರು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದಾರೆ. ಆದರೆ, ರೋಗ ನಿಯಂತ್ರಣದಲ್ಲಿದೆ ಎಂದು ಸರ್ಕಾರ ಹೇಳುತ್ತಿದೆ. ಒಂದು ಸಮಯ 11ನೇ ಸ್ಥಾನದಲ್ಲಿದ್ದ ರಾಜ್ಯ ಸದ್ಯ 5ನೇ ಸ್ಥಾನದಲ್ಲಿದ್ದು, ಒಂದೆರಡು ದಿನದಲ್ಲಿ ಗುಜರಾತ್ ಮೀರಿಸಿ ಮುಂದೆ ಸಾಗಲಿದೆ. ಈ ಸಂದರ್ಭ ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನು ಪ್ರತಿಪಕ್ಷವಾಗಿ ಕಾಂಗ್ರೆಸ್ ಮೇಲಿಂದ ಮೇಲೆ ಮಾಡುತ್ತಿದೆ ಎಂದು ಹೇಳಿದ್ದಾರೆ.