ಬೆಂಗಳೂರು :ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆಯಬೇಕಾದರೆ ವಿಶ್ವಸಂಸ್ಥೆಯನ್ನು ಸಂಪರ್ಕಿಸಬೇಕಾ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ಪ್ರಶ್ನೋತ್ತರ ವೇಳೆ ಕಲಘಟಗಿ ಕ್ಷೇತ್ರದ ಶಾಸಕ ನಿಂಬಣ್ಣನವರ್ ಅವರ ಪ್ರಶ್ನೆಗೆ ಡಿಸಿಎಂ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಉತ್ತರ ನೀಡಿ, ಧಾರವಾಡ-ರಾಮನಗರದ ನಡುವಿನ 62 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 237 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ವಿಳಂಬವಾಗಲು ರೈಲ್ವೆ ಇಲಾಖೆ ಮೇಲು ಸೇತುವೆಗಳ ವಿನ್ಯಾಸ ಬದಲಾಯಿಸಿದ್ದು ಕಾರಣ ಎಂದರು.
ಮೂರು ಮೇಲು ಸೇತುವೆಗಳ ಅಗಲ ಮತ್ತು ಎತ್ತರವನ್ನು ರೈಲ್ವೆ ಇಲಾಖೆ ಬದಲಾವಣೆ ಮಾಡಿದೆ. ಶೇಕಡ ಅರ್ಧದಷ್ಟು ವೆಚ್ಚ ಭರಿಸುವ ಯೋಜನೆಯಡಿ ರಾಜ್ಯ ಸರ್ಕಾರ ತನ್ನ ಪಾಲಿನ ಶೇ.50ರಷ್ಟು ಹಣವನ್ನು ರೈಲ್ವೆ ಇಲಾಖೆಗೆ ಪಾವತಿಸಿದೆ. ರಸ್ತೆಯ ನಡುವೆ ಅರಣ್ಯ ಪ್ರದೇಶ ಇದೆ. ಅಲ್ಲಿ ಕಾಮಕಾರಿ ಮುಂದುವರೆಸಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆಯಬೇಕಿದೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ರೈಲ್ವೆ ಇಲಾಖೆ ಕೂಡ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.
ಈ ಮಧ್ಯ ಮಾತನಾಡಿದ ಸ್ಪೀಕರ್ ಕಾಗೇರಿ, ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಎರಡು ಕಡೆಯಿಂದ ಪ್ರಯತ್ನಪಟ್ಟರು ಅನುಮತಿ ಸಿಕ್ಕಿಲ್ಲವೇ?. ಅರಣ್ಯ ಇಲಾಖೆ ಭಾರತದ ಒಳಗಿದೇಯೇ ಅಥವಾ ವಿಶ್ವಸಂಸ್ಥೆ ಸೇರಿದಂತೆ ಬೇರೆ ದೇಶದಲ್ಲಿದೇಯೇ ಎಂದು ಖಾರವಾಗಿ ಪ್ರಶ್ನಿಸಿದರು. ನಾವು ಶೇ.80 ರಷ್ಟು ಅರಣ್ಯ ಇರುವ ಭಾಗದಿಂದ ಬಂದಿದ್ದೇವೆ. ಅಲ್ಲಿನ ಅನುಮತಿ ಪಡೆಯುವ ಕಷ್ಟ ನಮಗೆ ಗೊತ್ತಿದೆ. ಮುಖ್ಯಮಂತ್ರಿಗಳು ಮತ್ತಿತರರು ಸೇರಿ ಚರ್ಚೆ ಮಾಡಿ ಸರಿಯಾದ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.
ಗಂಗಾಕಲ್ಯಾಣ ಯೋಜನೆಗೆ ಪ್ಯಾಕೇಜ್ ಟೆಂಡರ್ :ಗಂಗಾಕಲ್ಯಾಣ ಯೋಜನೆಯಡಿ ಕೊರೆಯಲಾಗುವ ಬೋರ್ ವೆಲ್ಗಳ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಮಾದರಿಯಲ್ಲಿ ಪ್ಯಾಕೇಜ್ ಟೆಂಡರ್ ಕರೆಯಲು ಚಿಂತನೆ ನಡೆದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹಾಗೂ ಮತ್ತಿತರ ಶಾಸಕರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಹಾಗೂ ಸಮಾಜಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು, ಗಂಗಾಕಲ್ಯಾಣ ಯೋಜನೆಯಿಂದ ಫಲಾನುಭವಿಗಳು ಜೀವನ ಮಟ್ಟ ಸುಧಾರಣೆಯಾಗಿದೆ. ಕೃಷಿ ಚಟುವಟಿಕೆಗಳು ಹೆಚ್ಚಾಗಿ ಆರ್ಥಿಕವಾಗಿ ಸಬಲೀಕರಣಗೊಂಡಿದ್ದಾರೆ.
ಆದರೆ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ನಿಜ. ಕೆಲವಡೆ ಬೋರ್ ವೆಲ್ ಕೊರೆದರೆ ಮೋಟರ್ ಪಂಪ್ ಅಳವಡಿಸಲು ಸಾಕಷ್ಟು ಸಮಯ ಹಿಡಿಯುತ್ತಿದೆ. ಅಲ್ಲಿಂದ ವಿದ್ಯುತ್ ಸಂಪರ್ಕಕ್ಕೂ ವಿಳಂಬಬವಾಗುತ್ತಿರುವುದು ನಿಜ ಎಂದು ಹೇಳಿದರು. ಈ ವಿಳಂಬವನ್ನು ತಪ್ಪಿಸಲು ಬೋರ್ ವೆಲ್ ಕೊರೆಯುವುದರಿಂದ ಆರಂಭಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಹೊರ ಬರುವವರೆಗೂ ಸಂಪೂರ್ಣವಾದ ಪ್ಯಾಕೇಜ್ ಟೆಂಡರ್ ನೀಡಲು ಚಿಂತನೆ ನಡೆಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಗೂ ಅದೇ ಮಾದರಿಯ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತರಲಾಗುವುದು ಎಂದರು.
ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ನಿಗದಿತ ಅವಧಿಯಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತನ್ನಿ, ಇಲ್ಲವಾದರೆ ನಿಲ್ಲಿಸಿ ಬಿಡಿ ಎಂದು ಆಗ್ರಹಿಸಿದರು. ಬಿಜೆಪಿ ಶಾಸಕ ಕೆ. ಜಿ. ಬೋಪ್ಪಯ್ಯ ಮಾತನಾಡಿ, ವಿದ್ಯುತ್ ಸಂಪರ್ಕಕ್ಕೆ ಇಲಾಖೆಯಿಂದ 50 ಸಾವಿರ ರೂ. ಮಾತ್ರ ನೀಡಲಾಗುತ್ತಿದೆ.
ಇದು ಸಾಲುವುದಿಲ್ಲ. ಮಲೆನಾಡು ಭಾಗದಲ್ಲಿ ವಿದ್ಯುತ್ ಸಂಪರ್ಕದ ವೆಚ್ಚ ದುಬಾರಿಯಾಗಲಿದೆ. ವಿದ್ಯುತ್ ಇಲಾಖೆಯ ಎಸ್ಕಾಂಗಳು ಎಷ್ಟು ಎಸ್ಟಿಮೇಟ್ ಕೊಡುತ್ತವೇಯೋ ಅಷ್ಟು ಹಣವನ್ನು ಸಮಾಜ ಕಲ್ಯಾಣ ಇಲಾಖೆ ನೀಡಬೇಕು ಎಂದು ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆ 50 ಸಾವಿರ ಮಾತ್ರ ಕೊಡಲಿದೆ. ಇನ್ನೂ ಹೆಚ್ಚಾದರೆ ಅದನ್ನು ವಿದ್ಯುತ್ ಇಲಾಖೆಯಲ್ಲೇ ಇರುವ ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನವನ್ನು ಖರ್ಚು ಮಾಡಿ ಸಂಪರ್ಕ ನೀಡಲಿ ಎಂದು ಸಚಿವರು ಸಲಹೆ ನೀಡಿದರು.