ದೇವನಹಳ್ಳಿ: ಕನ್ನಡ ರಾಜ್ಯೋತ್ಸವ ವೇದಿಕೆ ಮೇಲೆ ಬೆಂ. ಗ್ರಾಮಾಂತರ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ರಾಜ್ಯೋತ್ಸವ ವೇದಿಕೆಯಲ್ಲೇ, ಆರ್.ಅಶೋಕ್ ವಿರುದ್ಧ ದೇವನಹಳ್ಳಿ ಶಾಸಕರ ಅಸಮಾಧಾನ ದೇವನಹಳ್ಳಿ ಪಟ್ಟಣದ ಜ್ಯೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ 65ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ಅಶೋಕ್ ಧ್ವಜಾರೋಹಣ ಮಾಡಿದರು. ಆಹ್ವಾನ ಪತ್ರಿಕೆಯ ಪ್ರಕಾರ 9 ಗಂಟೆಗೆ ಧ್ವಜಾರೋಹಣ ಮಾಡಲು ಸಮಯ ನಿಗದಿ ಮಾಡಲಾಯಿತು.
ಆದರೆ, 8:45ಕ್ಕೆ ಧ್ವಜಾರೋಹಣ ಮಾಡಲಾಗಿದೆ. 9 ಗಂಟೆಗೆ ಬಂದ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಧ್ವಜಾರೋಹಣ ಕಾರ್ಯಕ್ರಮ 8:45ಕ್ಕೆ ಮುಗಿದು ಹೋಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮ ಮುಗಿದ ನಂತರ ವೇದಿಕೆಯ ಮೇಲೆಯೇ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರು ತಾವು ಪ್ರತಿಭಟನೆ ಮಾಡಿದ್ದರೆ, ಕಾರ್ಯಕ್ರಮ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ 9 ಗಂಟೆಯೊಳಗೆ ಧ್ವಜಾರೋಹಣ ಮಾಡದಿದ್ದಲ್ಲಿ ಮಾಧ್ಯಮದವರ ಕೆಂಗಣ್ಣಿಗೆ ಗುರಿಯಾಗ ಬೇಕಾಗುತ್ತಿತ್ತು ಎಂದು ಸಮಜಾಯಿಷಿ ನೀಡಿದರು.