ಬೆಂಗಳೂರು:ಕೋವಿಡ್-19 ನಿಯಂತ್ರಣಕ್ಕೆ ಬರುವವರೆಗೂ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಹೊರಗೆ ಅಸುನೀಗಿದವರ ಮೃತ ದೇಹಗಳನ್ನು ತರುವಂತಿಲ್ಲ. ಇದರ ಜೊತೆಗೆ ರಾಜ್ಯದೊಳಗೆ ಮರಣ ಹೊಂದಿದ ಹೊರ ರಾಜ್ಯದ ವ್ಯಕ್ತಿಗಳ ಮೃತದೇಹವನ್ನು ರಾಜ್ಯದಿಂದ ಹೊರ ಕಳುಹಿಸುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದು, ಸಭೆಯಲ್ಲಿ ಡಿಸಿಎಂಗಳಾದ ಅಶ್ವತ್ಥ ನಾರಾಯಣ್, ಗೋವಿಂದ ಕಾರಜೋಳ, ಸಚಿವರಾದ ಸುರೇಶ್ ಕುಮಾರ್, ಆರ್.ಅಶೋಕ್, ಸುಧಾಕರ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.
ಬೇರೆ ದೇಶ ಹಾಗೂ ರಾಜ್ಯದಿಂದ ಕನ್ನಡಿಗರು ವಾಪಸ್ ಬರುತ್ತಿದ್ದಾರೆ. ಅವರನ್ನು ಯಾವ ರೀತಿ ಕ್ವಾರಂಟೈನ್ ಮಾಡಬೇಕು ಎಂಬ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು ಮಹತ್ವದ ಚರ್ಚೆ ನಡೆಸಿದರು. ಈ ವೇಳೆ ವಲಸೆ ಕಾರ್ಮಿಕರ ವಿಚಾರವಾಗಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸಭೆಯಲ್ಲಿ ಕೈಗೊಂಡ ನಿರ್ಧಾರಗಳು:
- ಹೊರ ರಾಜ್ಯದಿಂದ ಬರುವ ಕನ್ನಡಿಗರು ನಿರ್ದಿಷ್ಟ ವ್ಯವಸ್ಥೆಯಡಿ ಬರುವಂತೆ ಮಾಡಬೇಕು.
- ರಾಜ್ಯಕ್ಕೆ ಬರುವವರು ಕಡ್ಡಾಯ ಆನ್ಲೈನ್ನಲ್ಲಿ ರಿಜಿಸ್ಟರ್ ಮಾಡಬೇಕು.
- ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ರಾಜ್ಯದಿಂದ ಅನಿವಾರ್ಯವಾಗಿ ಹೊರಹೋಗಿ ಸಿಕ್ಕಿ ಹಾಕಿಕೊಂಡಿರಬೇಕು.
- ಎಲ್ಲಿಗೆ ಬರುತ್ತೇವೆ ಮತ್ತು ಯಾವಾಗ ಬರುತ್ತೇವೆ ಅನ್ನೋದನ್ನು ರಿಜಿಸ್ಟರ್ ಮಾಡಬೇಕು.
- ಕ್ವಾರಂಟೈನ್ ಸೌಲಭ್ಯಕ್ಕೆ ಅನುಗುಣವಾಗಿ ಕರೆಸಿಕೊಳ್ಳಲಾಗುವುದು.
- ಬಂದ ತಕ್ಷಣ ಯಾರು ಅವರ ಊರಿಗೆ ಹೋಗುವಂತಿಲ್ಲ.
- ಬಂದ ಎಲ್ಲರೂ 14 ದಿನ ಕ್ವಾರಂಟೈನ್ ಆಗಲೇಬೇಕು.
- ಕ್ವಾರಂಟೈನ್ಗೆ ಸಿದ್ಧವಿದ್ದವರು ಮಾತ್ರ ನೋಂದಣಿ ಮಾಡಿಕೊಳ್ಳಬೇಕು.
- ಹೊರ ರಾಜ್ಯದಿಂದ ರೈಲುಗಳಲ್ಲಿ ಬರುವವರಿಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸುತ್ತದೆ.
- ಬೇರೆ ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರೂ, ರಾಜ್ಯದಲ್ಲಿ ಸೋಂಕು ಪರೀಕ್ಷೆ ಕಡ್ಡಾಯ
- ಬೇರೆ ರಾಜ್ಯದಲ್ಲಿ ಮೃತರಾದರೆ ಶವಗಳನ್ನು ರಾಜ್ಯಕ್ಕೆ ತರುವಂತಿಲ್ಲ.
- ಎಲ್ಲಿ ಮೃತರಾಗಿರುತ್ತಾರೋ ಅಲ್ಲಿಯೇ ಅಂತ್ಯಸಂಸ್ಕಾರ ಮಾಡಬೇಕು
- ರಾಜ್ಯದಲ್ಲಿ ತೀರಿಕೊಂಡರೆ ತೀರಿಕೊಂಡ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು.