ಗಂಗಾವತಿ:ಪಾಕ್ ಪರ ಘೋಷಣೆ ಕೂಗುವುದು ದೇಶ ದ್ರೋಹದ ಜೊತೆಗೆ ಅವರ ಹೀನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ಉದ್ಯಮಿಯೊಬ್ಬರ ನಿವಾಸಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಡಿಸಿಎಂ ಈ ವೇಳೆ ಮಾತನಾಡಿ, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರೋದು ನೋವಿನ ಸಂಗತಿ. 130 ಕೋಟಿ ಜನ ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ದೇಶಾಭಿಮಾನವಿರಬೇಕು. ದೇಶದ ಅನ್ನ ಉಂಡು, ಈ ನೆಲದಲ್ಲಿ ಬದುಕುವವರು ಯಾರೂ ಇಂತಹ ಚಟುವಟಿಕೆಯಲ್ಲಿ ತೊಡಗಬಾರದೆಂದು ತಿಳಿಸಿದರು.
ಪಾಕ್ ಪರ ಘೋಷಣೆ; ಜನ್ರ ಹೀನ ಮನಸ್ಥಿತಿಯನ್ನು ತೋರಿಸುತ್ತದೆಯೆಂದ ಡಿಸಿಎಂ! ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ, ಯಾರಿಗೂ ಬೇಡವಾದ ದೇಶ. ಪಾಕಿಸ್ತಾನ ಜಿಂದಾಬಾದ್ ಕೂಗೋ ಮನಸ್ಥಿತಿ ಅತ್ಯಂತ ಹೀನಾಯವಾದುದು ಎಂದ ಕಾರಜೋಳ, ಪ್ರಚೋದನೆಗೆ ಒಳಗಾಗಿ ಇತ್ತೀಚಿಗೆ ಇಂತಹ ಹೇಳಿಕೆ ಜಾಸ್ತಿಯಾಗ್ತಿದೆ. ಕೆಲ ಪಕ್ಷದವರು, ಕೆಲ ಸಂಘಟನೆ ಇಂತಹವರಿಗೆ ಸಪೋರ್ಟ್ ಮಾಡ್ತಿವೆ ಎಂದು ಆರೋಪಿಸಿದರು.
ಅಮೂಲ್ಯಗೆ ವೇದಿಕೆಯಲ್ಲಿ ಮಾತು ಪೂರ್ಣ ಮಾಡಲು ಬಿಡಬೇಕಿತ್ತು ಎಂಬ ಕಾಂಗ್ರೆಸ್ ಮುಖಂಡ ಡಿ.ಕೆ.ಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮೈಕ್ ತಗೊಂಡು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದಲ್ಲದೇ ಮಾತನಾಡಲು ಬಿಡಬೇಕು ಅಂದ್ರೆ ಏನರ್ಥ ಎಂದು ಪ್ರಶ್ನಿಸಿದರು. ಶಿವಕುಮಾರ್ ಇಂತಹ ರಾಜಕಾರಣ ಮಾಡಬಾರದೆಂದು ತಿಳಿಸಿದರು. ಕೆಲವರು, ಕೆಲ ಸಂಘಟನೆಗಳು ಮಕ್ಕಳ ತಲೆ ಕೆಡಿಸೋ ಕೆಲಸ ಮಾಡ್ತಿದ್ದಾರೆ. ಇದನ್ನ ನಾವು ಸಹಿಸಲ್ಲ ಎಂದರು.
ಕ್ಯಾಸಿನೋ ತೆರೆಯೋ ವಿಚಾರಕ್ಕೆ ಪ್ರತಿಕ್ರಿಯಿಸಿ , ನಮ್ಮ ಸರ್ಕಾರ ಇಂತಹ ಚಟುವಟಿಕೆಗೆ ಅವಕಾಶ ಕೊಡಲ್ಲ. ಗೋವಾ, ಮುಂಬೈಗೆ ಹೋದ್ರೆ ನಾವೇನ್ ಮಾಡೋಣ ಎಂದರು.