ಬೆಂಗಳೂರು : ರಾಜ್ಯದಲ್ಲಿ ಪ್ರವಾಹದಿಂದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 2,032 ಕೋಟಿ ರೂ. ಮೊತ್ತದ ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಹಾನಿಗೊಳಗಾಗಿವೆ. ತುರ್ತಾಗಿ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲು 478 ಕೋಟಿ ರೂ. ಅನುದಾನದ ಅಗತ್ಯವಿದೆ ಎಂದು ಲೋಕೋಪಯೋಗಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಹದಿಂದ ಆಗಿರುವ ಹಾನಿ ವಿವರ, ಹಾಗೂ ತುರ್ತು ಕಾಮಗಾರಿಗಳ ಕುರಿತು ಡಿಸಿಎಂ ಚರ್ಚಿಸಿದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ಲೋಕೋಪಯೋಗಿ ಇಲಾಖೆಯ ರಸ್ತೆಗಳು, ಸೇತುವೆಗಳು ಹಾಗೂ ಕಟ್ಟಡಗಳು ದುರಸ್ತಿಗೆ ಬಂದಿರುವುದರಿಂದ ಸಾರ್ವಜನಿಕರಿಗೆ ಸಂಪರ್ಕಕ್ಕೆ ತೊಂದರೆಯಾಗಿದೆ. ಉತ್ತರ ವಲಯದಲ್ಲಿ 1,437 ಕೋಟಿ, ಕೇಂದ್ರ ವಲಯದಲ್ಲಿ 135, ದಕ್ಷಿಣ ವಲಯದಲ್ಲಿ 181, ಈಶಾನ್ಯ ವಲಯದಲ್ಲಿ 71 ಹಾಗೂ ರಾಷ್ಟ್ರೀಯ ಹೆದ್ದಾರಿಯ 26 ಕೋಟಿ ರೂ. ವೆಚ್ಚದ ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಹಾನಿಗೊಳಗಾಗಿವೆ ಎಂದರು.