ಕರ್ನಾಟಕ

karnataka

ETV Bharat / city

ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸುತ್ತಿರುವವರಿಗೆ ತಕ್ಕ ಶಾಸ್ತಿ ಕಾದಿದೆ : ಡಿಸಿಎಂ ಅಶ್ವತ್ಥ್ ನಾರಾಯಣ - ಕೋಡಿಹಳ್ಳಿ ಚಂದ್ರಶೇಖರ್‌

ಮುಖ್ಯಮಂತ್ರಿಗಳು ಸಾಧ್ಯವಾಗುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ರಾಜ್ಯದ ಜನರು ಬಸ್‌ ಸೌಕರ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗುವುದು ಬೇಡ. ಸಾರಿಗೆ ಸಿಬ್ಬಂದಿ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು..

ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ

By

Published : Dec 14, 2020, 6:37 AM IST

ಬೆಂಗಳೂರು: ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸುತ್ತಿರುವ ನಕಲಿ ನಾಯಕರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಅವರು ಕೋಡಿಹಳ್ಳಿ ಚಂದ್ರಶೇಖರ್‌ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಮುಷ್ಕರ ಮುಂದುವರೆಸುವುದು ಸೂಕ್ತವಲ್ಲ, ಮುಖ್ಯಮಂತ್ರಿಗಳ ಮುಂದೆಯೇ ಮುಷ್ಕರ ವಾಪಸ್‌ ಪಡೆಯುವುದಾಗಿ ಒಪ್ಪಿಕೊಂಡು ಹೋದ ಮುಖಂಡರು ಹೊರಗೆ ಹೋದ ಸ್ವಲ್ಪ ಸಮಯದಲ್ಲೇ ತಮ್ಮ ನಿರ್ಧಾರ ಬದಲಿಸಿದ್ದು ಯಾಕೆ?, ಅವರ ಹಿಂದೆ ಯಾರಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಕಾಣದ ಶಕ್ತಿಗಳು ನೌಕರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ರೈತ ನಾಯಕರ ಸೋಗಿನಲ್ಲಿದ್ದವರು ಇದ್ದಕ್ಕಿದ್ದ ಹಾಗೆ ಸಾರಿಗೆ ನೌಕರರ ಮುಖಂಡರಾಗಿದ್ದು ಹೇಗೆ?, ಇದರಲ್ಲಿ ಅಡಗಿರುವ ಹಿತಾಸಕ್ತಿ ಏನು?, ಮುಂದೆ ಕಾರ್ಮಿಕರನ್ನು ಬಿಟ್ಟು ಹಿಂದೆ ಯಾರೆಲ್ಲಾ ಆಟ ಆಡುತ್ತಿದ್ದಾರೆ?, ಅವರ ದುರುದ್ದೇಶವೇನಿದೆ? ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ. ಸರ್ಕಾರಕ್ಕೂ ಈ ಬಗ್ಗೆ ಗೊತ್ತಿದೆ ಎಂದು ಡಿಸಿಎಂ ನೇರವಾಗಿ ಕೋಡಿಹಳ್ಳಿ ಚಂದ್ರಶೇಖರ್‌ ಮೇಲೆ ಚಾಟಿ ಬೀಸಿದರು.

ಮುಖ್ಯಮಂತ್ರಿಗಳು ಸಾಧ್ಯವಾಗುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ರಾಜ್ಯದ ಜನರು ಬಸ್‌ ಸೌಕರ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗುವುದು ಬೇಡ. ಸಾರಿಗೆ ಸಿಬ್ಬಂದಿ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಸರ್ಕಾರದ ಆರ್ಥಿಕ ಶಕ್ತಿಯ ಇತಿಮಿತಿಯೊಳಗೆ ಕೆಲ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಮಾತಿಗೆ ಓಗೊಟ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಬೇಕು. ಜನರು ಸಂಕಷ್ಟ ಅನುಭವಿಸಿದ್ದು ಸಾಕು, ಸಾರಿಗೆ ಸಿಬ್ಬಂದಿ ಬೇಡಿಕೆಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತದೆ. ಕೂಡಲೇ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂಬುದು ನನ್ನ ಮನವಿ ಎಂದಿದ್ದಾರೆ.

ABOUT THE AUTHOR

...view details