ಬೆಂಗಳೂರು:ರಾತ್ರಿ ವೇಳೆ ನಿಮಗೇನಾದರೂ ವಿಡಿಯೋ ಕಾಲ್ ಬರುತ್ತಿದೆಯಾ? ಅದರಲ್ಲಿಯೂ ಅಪರಿಚಿತರು ಕರೆ ಮಾಡುತ್ತಿದ್ದಾರಾ..? ಹಾಗಾದರೆ ಎಚ್ಚರ ಮುಂದೆ ಈ ತರಹದ ವಿಡಿಯೋ ಕಾಲ್ ಸ್ವೀಕರಿಸದೇ ಇರುವುದೇ ಒಳಿತು. ಯಾಕೆಂದರೆ ಮಹಿಳೆ ಅಶ್ಲೀಲ ವಿಡಿಯೋ ತೋರಿಸಿ ಹಣ ಕೀಳುವ ಸೈಬರ್ ಖದೀಮರ ಹಾವಳಿ ನಗರದಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ.
ಹೊಸ ಹೊಸ ರೀತಿಯಲ್ಲಿ ವಂಚನೆ ಎಸಗುವ ಸೈಬರ್ ಖದೀಮರು ಇದೀಗ ಮಹಿಳೆಯ ಬೆತ್ತಲೆ ವಿಡಿಯೋ ಇರುವ ಹಾಗೆ ಕಾಲ್ ಮಾಡಿ ಲಕ್ಷ ಲಕ್ಷ ವಸೂಲಿ ಮಾಡುತ್ತಿದ್ದಾರೆ. ಅಕ್ರಮ ಹಣ ಸಂಪಾದನೆಗೆ ಹೊಸ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಐಡಿ ರಚಿಸಿಕೊಳ್ಳುವ ವಂಚಕರು ಮುಗ್ದರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ರಿಕ್ವೆಸ್ಟ್ ಸ್ವೀಕರಿಸಿದ ನಂತರ ವಾಟ್ಸ್ಆ್ಯಪ್ ಸಂಖ್ಯೆ ಪಡೆದು ಖದೀಮರು ಸ್ನೇಹದ ಸೋಗಿನಲ್ಲಿ ಚಾಟ್ ಮಾಡುತ್ತಾರೆ. ಸಲುಗೆ ಹೆಚ್ಚಾಗುತ್ತಿದ್ದಂತೆ ಮಧ್ಯರಾತ್ರಿ ವಿಡಿಯೋ ಕಾಲ್ ಮಾಡಿ, ಬೆತ್ತಲೆ ವಿಡಿಯೋ ತೋರಿಸುತ್ತಾರೆ. ಕ್ಷಣಾರ್ಧದಲ್ಲಿ ಸ್ಕ್ರೀನ್ ಶಾಟ್ ಅಥವಾ ವಿಡಿಯೊ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಅದೇ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಮಾಡಿ ಮಾನ ಹರಾಜು ಹಾಕುವುದಾಗಿ ಧಮಕಿ ಹಾಕುತ್ತಾರೆ.
ಇದನ್ನೂ ಓದಿ:ಅಕ್ರಮ ಸಂಬಂಧ ವಿಚಾರಕ್ಕೆ ಪತಿಯ ಹತ್ಯೆ: ಪತ್ನಿ-ಪ್ರಿಯಕರ ಸೇರಿ ಮೂವರ ಬಂಧನ
ಇತ್ತೀಚಿನ ದಿನಗಳಲ್ಲಿ ವಿಡಿಯೊ ಕಾಲ್ ಮಾಡಿ ಇಂತಹ ಪ್ರವೃತ್ತಿ ಮೆರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ಮಯಾರ್ದೆಗೆ ಅಂಜಿ ಹಣ ನೀಡಿ ಸುಮ್ಮನಾದರೆ, ಇನ್ನೂ ಕೆಲವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ.