ಬೆಂಗಳೂರು: ಗೋವಾ ರಾಜ್ಯದ ಚುನಾವಣಾ ಗೆಲುವಿನ ನಂತರ ಚುನಾವಣಾ ಮುಂದಾಳತ್ವ ವಹಿಸಿದ್ದ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ನವದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದರು.
ಗೋವಾ ಚುನಾವಣಾ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಗೋವಾ ಉಸ್ತುವಾರಿ ಸಿಎಂ ಪ್ರಮೋದ್ ಸಾವಂತ್, ಗೋವಾ ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್, ಗೋವಾ ಸಂಘಟನಾ ಕಾರ್ಯದರ್ಶಿ ಸತೀಶ್ ಧೋಮಂಡ್ ನವದೆಹಲಿಯ ಪ್ರಧಾನಿ ಕಚೇರಿಗೆ ಭೇಟಿ ನೀಡಿ, ಮೋದಿ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಗೋವಾದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಫಲರಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ಕಚೇರಿಯಲ್ಲಿ ಗೋವಾ ಚುನಾವಣೆ ಕುರಿತು ನಡೆದ ಚರ್ಚೆ ನನಗೆ ಉತ್ತಮ ಅನುಭವ ನೀಡಿತು ಎಂದು ಟ್ವೀಟ್ ಮೂಲಕ ಸಿ.ಟಿ.ರವಿ ತಿಳಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ನಲ್ಲಿ ಮತ್ತೆ ಕಿಡಿ ಹೊತ್ತಿಸಿದ ಕಪಿಲ್ ಸಿಬಲ್ ಹೇಳಿಕೆ: ಹಿರಿಯ ನಾಯಕನ ವಿರುದ್ಧ ಮುಗಿಬಿದ್ದ ಪಕ್ಷ ನಿಷ್ಠರು
ಮನೋಹರ್ ಪರಿಕ್ಕರ್ ನಿಧನದ ನಂತರ ಗೋವಾದಲ್ಲಿ ಆವರಿಸಿದ್ದ ಶೂನ್ಯವನ್ನು ಸವಾಲಾಗಿ ಸ್ವೀಕರಿಸಿದ್ದ ಬಿಜೆಪಿ, ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪರಿಕ್ಕರ್ ಪುತ್ರನಿಗೆ ಟಿಕೆಟ್ ನೀಡದೆ ವಂಶಪಾರಂಪರ್ಯ ರಾಜಕಾರಣಕ್ಕೆ ಅವಕಾಶ ನೀಡದಿರುವ ನಿಲುವನ್ನು ಅನುಷ್ಠಾನಕ್ಕೆ ತಂದು ಕ್ಷೇತ್ರ ಗೆದ್ದಿರುವುದಕ್ಕೆ ಗೋವಾ ಮುಖಂಡರಿಗೆ ಪ್ರಧಾನಿ ಅಭಿನಂದಿಸಿದ್ದಾರೆ.