ಕರ್ನಾಟಕ

karnataka

By

Published : Jul 5, 2021, 11:17 AM IST

ETV Bharat / city

Unlock 3.0 ಜಾರಿ: ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕೋವಿಡ್​ ನಿಯಮಗಳಿಗಿಲ್ಲ ಕಿಮ್ಮತ್ತು!

ಕೋವಿಡ್​ನಿಂದಾಗಿ ಅನೇಕ ಸಾವು ನೋವುಗಳಾದರೂ ಕೂಡ ಸಿಲಿಕಾನ್​ ಸಿಟಿ ಮಂದಿ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಅನ್​ಲಾಕ್​ ಜಾರಿಯಾಗುತ್ತಿದ್ದಂತೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಇಲ್ಲಿನ ಜನರು ಬ್ಯುಸಿಯಾಗಿದ್ದಾರೆ.

Bangalore
ಮಾರುಕಟ್ಟೆಗಳಲ್ಲಿ ಕೋವಿಡ್​ ನಿಯಮಗಳಿಗಿಲ್ಲ ಕಿಮ್ಮತ್ತು

ಬೆಂಗಳೂರು: ರಾಜ್ಯದಲ್ಲಿ ಅನ್​ಲಾಕ್ 3.0 ಜಾರಿ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು, ರೈಲು, ಬಸ್​ ಸಂಚಾರ, ಮಠ, ಮಂದಿರಗಳು ಸೇರಿದಂತೆ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಕೆ.ಆರ್.ಮಾರ್ಕೆಟ್​ ಜನರಿಂದ ತುಂಬಿ ತುಳುಕುತ್ತಿದ್ದು, ಕೋವಿಡ್ ನಿಯಮಗಳು ಅಸ್ತಿತ್ವದಲ್ಲಿದ್ದರೂ ಜನರು ಸಾಮಾಜಿಕ ಅಂತರ ಮರೆತು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಮಾರುಕಟ್ಟೆಗಳಲ್ಲಿ ಕೋವಿಡ್​ ನಿಯಮಗಳಿಗಿಲ್ಲ ಕಿಮ್ಮತ್ತು

ರಾಜ್ಯಸರ್ಕಾರ ಎರಡನೇ ಅಲೆಯ ಸಂಬಂಧ ಏಪ್ರಿಲ್ 27ರಿಂದ 14 ದಿನಗಳ ಮೊದಲ ಹಂತದ ಲಾಕ್​ಡೌನ್​ ಘೋಷಿಸಿತ್ತು. ಬಳಿಕ ಕೋವಿಡ್​ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜೂನ್ 7ರವರೆಗೆ ಲಾಕ್​ಡೌನ್ ಮುಂದುವರೆಸಲಾಗಿತ್ತು. ನಂತರ ಹಂತಹಂತವಾಗಿ ಅನ್​ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಇಂದಿನಿಂದ ಅನ್​ಲಾಕ್ 3.0 ಜಾರಿಯಾಗಿದೆ. ಆದರೆ, ಕೋವಿಡ್​ನಿಂದಾಗಿ ಅನೇಕ ಸಾವು ನೋವುಗಳಾದರೂ ಕೂಡ ಇಲ್ಲಿನ ಜನ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಮೈಮರೆತಿದ್ದಾರೆ.

ರಾಜಧಾನಿಯ ಯಶವಂತಪುರ, ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ ಮಾರ್ಕೆಟ್​ನಲ್ಲಿ ಜನರ ದೊಡ್ಡ ಗುಂಪು ಕಂಡುಬಂತು. ರಸ್ತೆಬದಿ ವ್ಯಾಪಾರ ಕೂಡ ಬಲು ಜೋರಾಗಿದ್ದು, ನಿಯಮ ಮೀರಿ ಖರೀದಿಗೆ ಜನರು ಮುಂದಾಗಿದ್ದರು. ಒಟ್ಟಿನಲ್ಲಿ ಕೊರೊನಾಗೆ ಬೆಂಗಳೂರು ಜನರು ಡೋಂಟ್ ಕೇರ್ ಎನ್ನುತ್ತಿರುವುದು ವಿಪರ್ಯಾಸವೇ ಸರಿ.

ಬಸ್, ಮೆಟ್ರೋ ಸಂಪೂರ್ಣ ಕಾರ್ಯಾಚರಣೆ: ಪ್ರಯಾಣಿಕರು ಮಾತ್ರ ವಿರಳ

ಅನ್​ಲಾಕ್ 3.0 ಜಾರಿಯಾಗಿದ್ದು, ಬಿಎಂಟಿಸಿ ಬಸ್ಸುಗಳು ಸಂಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿದಿವೆ. ಇಂದಿನಿಂದ ಸರ್ಕಾರಿ ಕಚೇರಿ ಸೇರಿದಂತೆ ಎಲ್ಲೆಡೆ ಶೇ. 100 ರಷ್ಟು ಅವಕಾಶ ಕೊಟ್ಟಿರುವುದರಿಂದ ಬಸ್, ಮೆಟ್ರೋ ಸಂಚಾರಕ್ಕೂ ಅನುಮತಿ ಸಿಕ್ಕಿದೆ. ಆದ್ರೆ ಬೆಂಗಳೂರಿನಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಬಿಎಂಟಿಸಿ ಬಸ್ ಸಂಚಾರವಿರುವುದಿಲ್ಲ.

ಬಸ್, ಮೆಟ್ರೋ ಸಂಪೂರ್ಣ ಕಾರ್ಯಾಚರಣೆ

ಕೆಎಸ್​ಆರ್​ಟಿಸಿ, ಬಿಎಂಟಿಸಿ, ಮೆಟ್ರೋ ಮತ್ತು ಖಾಸಗಿ ಬಸ್​ಗಳು ಬೆಳಗ್ಗೆಯಿಂದಲೇ ಪೂರ್ಣ ಕಾರ್ಯಾಚರಣೆಗಿಳಿದಿವೆ. ಅನ್​ಲಾಕ್ 2.0ನಲ್ಲಿ ಬಿಎಂಟಿಸಿ 3,000 ಸಾವಿರ ಬಸ್​ಗಳು ರಸ್ತೆಗಿಳಿದಿದ್ದವು. ಇಂದಿನಿಂದ 5,000 ಬಿಎಂಟಿಸಿ ಬಸ್​ಗಳು, 4,000 ಕೆಎಸ್​ಆರ್​ಟಿಸಿ ಬಸ್​ಗಳು ಕಾರ್ಯಾಚರಣೆಗಿಳಿದಿವೆ.

ಪ್ರಯಾಣಿಕರು ಸೀಟ್​ನಲ್ಲಿ ಮಾತ್ರ ಕುಳಿತು ಪ್ರಯಾಣಿಸಲು ಅವಕಾಶವಿದ್ದು, ಬಸ್​ನಲ್ಲಿ ನಿಂತುಕೊಂಡು ಪ್ರಯಾಣಿಸಲು ಅವಕಾಶ ಇಲ್ಲ. ಜೊತೆಗೆ ಕೋವಿಡ್ ರೂಲ್ಸ್ ಪಾಲಿಸದ ಪ್ರಯಾಣಿಕರಿಗೆ ಬಸ್ ನಿಲ್ದಾಣಗಳಲ್ಲಿ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ.

ಪ್ರಯಾಣಿಕರು ಮತ್ತು ಚಾಲಕರು, ನಿರ್ವಾಹಕರಿಗೆ ಮಾಸ್ಕ್ ಕಡ್ಡಾಯ ಎಂದು ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಆದರೂ ಜನ ಸಂಚಾರ ಎಂದಿನಂತೆ ಇಲ್ಲ. ಪ್ರಯಾಣಿಕರು ಕಡಿಮೆ ಪ್ರಮಾಣದಲ್ಲಿ ಓಡಾಟ ನಡೆಸುತ್ತಿದ್ದಾರೆ. ನೈಟ್ ಕರ್ಫ್ಯೂ ಹಿನ್ನೆಲೆ ರಾತ್ರಿ ಪಾಳಿಯ ಬಸ್ ಓಡಾಟವಿಲ್ಲ.

ಅನ್​ಲಾಕ್ 2.0ನಲ್ಲಿ 2,000 ರಿಂದ 2,500 ಕೆಎಸ್​ಆರ್​ಟಿಸಿ ಬಸ್​ಗಳ ಕಾರ್ಯಾಚರಣೆ ಮಾಡಲಾಗಿತ್ತು. ಇಂದಿನಿಂದ 3,500 ರಿಂದ 4,000 ಬಸ್ ಗಳು ಕಾರ್ಯಾಚರಣೆ ಮಾಡಲಿವೆ. ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ಅವಕಾಶ ನೀಡಿರುವ ಹಿನ್ನೆಲೆ, ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಮೇಲೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಕೆಎಸ್​ಆರ್​ಟಿಸಿ ಬಸ್​ಗೆ ಯಾವುದೇ ಸಮಯದ ನಿರ್ಬಂಧವಿಲ್ಲ. ರಾತ್ರಿ ವೇಳೆಯಲ್ಲೂ ಕೆಎಸ್​ಆರ್​ಟಿಸಿ ಬಸ್​ಗಳು ಕಾರ್ಯಾಚರಣೆ ಮಾಡಲಿವೆ.

ಇದನ್ನೂ ಓದಿ:ರಾಜ್ಯದಲ್ಲಿ ಶೀಘ್ರ ದುಷ್ಟ ಸಂಹಾರ: ತಾಯಿ ಚಾಮುಂಡಿ ಸನ್ನಿಧಿಯಲ್ಲಿ ಯತ್ನಾಳ್​ ಉವಾಚ!

ABOUT THE AUTHOR

...view details