ಬೆಂಗಳೂರು: ಕೋವಿಡ್ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕದ ಮೇಲಿನ ಅವಲಂಬನೆ ಕಡಿಮೆ ಮಾಡುವ 2-ಡಿಜಿ ಔಷಧ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಜ್ಞಾನಿಗಳಿಂದ ಮಾಹಿತಿ ಪಡೆದರು.
ಓದಿ: ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಇಲ್ಲೇ ಹಂಚಿಕೆ ಮಾಡಲು ಕೇಂದ್ರಕ್ಕೆ ಮನವಿ: ಸುಧಾಕರ್
ಡಿಆರ್ಡಿಒಗೆ ಭೇಟಿ ನೀಡಿದ ಸಚಿವರಿಗೆ ಈ ಕುರಿತು ವಿಜ್ಞಾನಿಗಳು ವಿವರಿಸಿದರು. ಡಿಆರ್ಡಿಒದ ಇನ್ಸಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆ್ಯಡ್ ಅಲೈಡ್ ಸೈನ್ಸಸ್ ಲ್ಯಾಬ್ ಹಾಗೂ ಡಾ.ರೆಡ್ಡೀಸ್ ಲ್ಯಾಬ್ ಸಹಯೋಗದಲ್ಲಿ ತಯಾರಿಸಿದ ಈ ಔಷಧ ರೋಗಿಗಳು ಬೇಗನೆ ಗುಣಮುಖರಾಗಲು ನೆರವಾಗಲಿದೆ. ಈ ಔಷಧದಿಂದ ಕೋವಿಡ್ ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ಸಾಬೀತಾಗಿದೆ. ತುರ್ತು ಬಳಕೆಯ ಆಧಾರದಲ್ಲಿ ಕೋವಿಡ್ ರೋಗಿಗಳಿಗೆ ಈ ಔಷಧ ನೀಡಲು ಅನುಮತಿ ದೊರೆತಿದ್ದು, ಸಕಾರಾತ್ಮಕ ಫಲಿತಾಂಶ ಕಂಡುಬಂದಿದೆ ಎಂದು ವಿಜ್ಞಾನಿಗಳು ವಿವರಿಸಿದರು.
ಕೋವಿಡ್ ಎರಡನೇ ಅಲೆಯಲ್ಲಿ ಅನೇಕರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಹೆಚ್ಚಿನವರಿಗೆ ಆಕ್ಸಿಜನ್ ಬೇಕಾಗಿದೆ. ಈ ಔಷಧ ನೀಡುವುದರಿಂದ ಆಕ್ಸಿಜನ್ ಬಳಕೆ ತಗ್ಗಲಿದೆ. ಜೊತೆಗೆ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆಯಾಗಲಿದೆ ಎಂದು ತಿಳಿಸಿದರು.