ಕರ್ನಾಟಕ

karnataka

ETV Bharat / city

ಪತ್ನಿಯನ್ನು ತವರಿಗೆ ಕಳುಹಿಸಲು ಒಪ್ಪದೆ ಅತ್ತೆಯನ್ನೇ ಕೊಂದ ಅಳಿಯ: ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಮಗಳನ್ನು ಮನೆಗೆ ಕಳುಹಿಸಿಕೊಡಿ ಅಂದಿದ್ದಕ್ಕೆ ಕುಪಿತನಾದ ಅಳಿಯ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಆದರೆ ಚಿಕಿತ್ಸೆ ಫಲಿಸದೆ ಅತ್ತೆ ಅಸುನೀಗಿದ್ದಾಳೆ. 2012ರಲ್ಲಿ ನಡೆದ ಈ ಘಟನೆಗೆ ನ್ಯಾಯಾಲಯ ಇದೀಗ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Court
Court

By

Published : Nov 4, 2020, 3:05 PM IST

ಬೆಂಗಳೂರು:ಪತ್ನಿಯನ್ನು ತವರಿಗೆ ಕಳುಹಿಸಲು ಒಪ್ಪದೆ ಅತ್ತೆಯೊಂದಿಗೆ ಜಗಳ ಮಾಡಿ, ಆಕೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಆರೋಪಿಗೆ ಬೆಂಗಳೂರಿನ 67ನೇ ಸಿಸಿಹೆಚ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆಂಧ್ರ ಪ್ರದೇಶ ಮೂಲದ ರಾಮಲಿಂಗಪ್ಪ ಶಿಕ್ಷೆಗೆ ಒಳಗಾಗಿರುವ ಅಪರಾಧಿ. ಈತ ತನ್ನ ಪತ್ನಿಯೊಂದಿಗೆ ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಿದ್ದ. ಈತನ ಪತ್ನಿ ಲಕ್ಷ್ಮಿದೇವಮ್ಮಳನ್ನು ಆಕೆಯ ತಾಯಿ ವೆಂಕಟಲಕ್ಷ್ಮಮ್ಮ ಕೆಲ ಕಾಲ ತವರಿಗೆ ಕರೆದೊಯ್ಯಲು 2012ರ ಜುಲೈ 7ರಂದು ಮನೆಗೆ ಬಂದಿದ್ದರು. ಈ ವೇಳೆ ಪತ್ನಿಯನ್ನು ಅತ್ತೆಯೊಂದಿಗೆ ಕಳುಹಿಸಲು ಒಪ್ಪದ ರಾಮಲಿಂಗಪ್ಪ ಜಗಳ ಮಾಡಿದ್ದ. ಗಲಾಟೆ ವಿಕೋಪಕ್ಕೆ ಹೋಗಿ ಅತ್ತೆಗೆ ಚಾಕುವಿನಿಂದ ಇರಿದಿದ್ದ. ಘಟನೆಯಲ್ಲಿ ಚಿಕಿತ್ಸೆ ಫಲಿಸದೆ ವೆಂಕಟಲಕ್ಷ್ಮಮ್ಮ ಸಾವನ್ನಪ್ಪಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಆರೋಪಿ ರಾಮಲಿಂಗಪ್ಪ ವಕೀಲರನ್ನು ನೇಮಿಸಿಕೊಂಡಿಲ್ಲ ಎಂಬುದನ್ನು ಹಾಗೂ ಆತ ಘಟನೆಯ ಬಳಿಕ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾನೆ ಎಂಬುದನ್ನು ಗುರುತಿಸಿದ ನ್ಯಾಯಾಲಯ ಆತನಿಗೆ ಕೆಲ ಕಾಲ ನಿಮ್ಹಾನ್ಸ್​ನಲ್ಲಿ ಚಿಕಿತ್ಸೆ ಕೊಡಿಸಲು ಸರ್ಕಾರಕ್ಕೆ ಸೂಚಿಸಿತ್ತು. ಹಾಗೆಯೇ ಸರ್ಕಾರಿ ವಕೀಲರನ್ನು ನಿಯೋಜಿಸಿಕೊಟ್ಟಿತ್ತು.

ವಿಚಾರಣೆ ವೇಳೆ ತಾನು ಕೊಲೆ ಮಾಡಿಲ್ಲ ಎಂದಿದ್ದ ಆರೋಪಿ, ಬಳಿಕ ನಡೆದ ಪಾಟಿ ಸವಾಲಿನಲ್ಲಿ ಕೃತ್ಯ ಒಪ್ಪಿಕೊಂಡಿದ್ದ. ಹಾಗೆಯೇ ಆರೋಪಿಗೆ ತೆಲುಗು ಬಿಟ್ಟು ಬೇರೆ ಭಾಷೆ ಬಾರದ ಕಾರಣ ಆತನ ಹೇಳಿಕೆಯನ್ನು ತೆಲುಗಿನಲ್ಲಿ ದಾಖಲಿಸಿಕೊಂಡು ನಂತರ ಕನ್ನಡಕ್ಕೆ ತರ್ಜುಮೆ ಮಾಡಿ ಶಿಕ್ಷೆ ವಿಧಿಸಲಾಗಿದೆ.

ABOUT THE AUTHOR

...view details