ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 181ಕ್ಕೆ ಏರಿಕೆಯಾಗಿದೆ. ಅದರಲ್ಲಿ 28 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಐವರು ಕೊರೊನಾಗೆ ಬಲಿಯಾಗಿದ್ದಾರೆ. ವೆಂಟಿಲೇಟರ್ನಲ್ಲಿದ್ದ ರೋಗಿ 102 ಚೇತರಿಸಿಕೊಂಡಿದ್ದಾರೆ. ಐಸಿಯು ವೆಂಟಿಲೇಟರ್ನಲ್ಲಿದ್ದ ಅವರನ್ನು ಈಗ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನಸಂದಣಿ ಇರುವ ಕಡೆಗಳಲ್ಲಿ ಓಡಾಡುವ ಜನರು ಮಾಸ್ಕ್ ಹಾಕುವುದು ಕಡ್ಡಾಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಡಕ್ ಸೂಚನೆ ನೀಡಿದೆ. ಹೋಮ್ ಮೇಡ್ ಮಾಸ್ಕ್ ಹಾಕಿಕೊಂಡು ಹೊರ ಬರುವಂತೆ ಸೂಚನೆ ನೀಡಿದೆ. ಮಾಸ್ಕ್ ಹಾಕದಿದ್ದರೆ ದಂಡ ವಿಧಿಸಲಾಗುತ್ತದೆ ಎಂದೂ ತಿಳಿಸಿದೆ.
ಆರೋಗ್ಯ ಸಿಬ್ಬಂದಿಗಳಿಗೆ ವಿಮೆ
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಎಲ್ಲಾ ನರ್ಸ್ ಮತ್ತು ವೈದ್ಯರಿಗೆ ವಿಮೆ ಮಾಡಿಸಲು ಚಿಂತನೆ ನಡೆದಿದೆ. ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ದೇಶದ ಕೋವಿಡ್ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಮತ್ತು ದಾದಿಯರನ್ನು ನೋಂದಣಿ ಮಾಡಲಾಗುವುದು.
ಚಿಕಿತ್ಸೆ ವೇಳೆ ವೈದ್ಯ, ನರ್ಸ್ ಅಥವಾ ಆಸ್ಪತ್ರೆ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ 50 ಲಕ್ಷ ರೂ. ವಿಮೆ ಪರಿಹಾರ ನೀಡಲಾಗುವುದು. ಈ ಸಂಬಂಧ ಕೇಂದ್ರದಿಂದ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬಂದಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಸುವ ಕುರಿತು ತೀರ್ಮಾನ ಕೈಗೊಂಡಿಲ್ಲ. ಪ್ರಧಾನಿ ಮೋದಿ ಅವರಿಗೆ ಸಿಎಂ ಯಡಿಯೂರಪ್ಪ ಪತ್ರ ಬರೆದಿಲ್ಲ. ಟಾಸ್ಕ್ ಫೋರ್ಸ್ನಲ್ಲಿರುವ ವೈದ್ಯರ ಸಲಹೆಗಳ ಪತ್ರ ಸಿಎಂಗೆ ತಲುಪಿದೆ. ಈ ಸಲಹೆಗಳನ್ನು ಮುಂದಿಟ್ಟುಕೊಂಡು ನಾಳಿನ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತೆ. ಬಿಬಿಎಂಪಿ ವ್ಯಾಪ್ತಿಯ 31 ಫೀವರ್ ಕ್ಲಿನಿಕ್ನಲ್ಲಿ ಇಂದು ಒಂದೇ ದಿನ 168 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ. ಈವರೆಗೆ 2,342 ವ್ಯಕ್ತಿಗಳ ತಪಾಸಣೆ ಮಾಡಲಾಗಿದೆ.
ಜಿಲ್ಲಾವಾರು ಸೋಂಕಿತ ಅಂಕಿ-ಅಂಶ ಹೀಗಿದೆ?
- ಬೆಂಗಳೂರು - 63
- ಬೆಂಗಳೂರು ಗ್ರಾಮಾಂತರ - 03
- ಮೈಸೂರು - 35
- ಬೀದರ್ - 10
- ಚಿಕ್ಕಬಳ್ಳಾಪುರ - 8
- ದಕ್ಷಿಣ ಕನ್ನಡ - 12
- ಉತ್ತರ ಕನ್ನಡ - 9
- ಕಲಬುರಗಿ - 9
- ದಾವಣಗೆರೆ - 3
- ಉಡುಪಿ - 3
- ಬೆಳಗಾವಿ - 7
- ಬಳ್ಳಾರಿ - 6
- ಕೊಡಗು - 1
- ಧಾರವಾಡ - 1
- ತುಮಕೂರು - 1
- ಬಾಗಲಕೋಟೆ - 5
- ಮಂಡ್ಯ - 4
- ಗದಗ - 1