ಕರ್ನಾಟಕ

karnataka

ETV Bharat / city

ನಮ್ಮ ಮೆಟ್ರೋ ಸೇವೆಯಲ್ಲಿ ಭಾರೀ ಬದಲಾವಣೆ: ಈ ವೇಳಾಪಟ್ಟಿ ಒಮ್ಮೆ ಗಮನಿಸಿ - ಕೊರೊನಾ ಸೋಂಕು

ರಾಜ್ಯದಲ್ಲಿ ಕೊರೊನಾ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟುವ ಹಿನ್ನೆಲೆ ಸರ್ಕಾರ ಸೇರಿದಂತೆ ಸಾರಿಗೆ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿವೆ. ಅದರಂತೆ ಬಿಎಂಆರ್​ಸಿಎಲ್​ ನಮ್ಮ ಮೆಟ್ರೋದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ.

corona-effect-namma-metro-time-table-has-changed
ನಮ್ಮ ಮೆಟ್ರೋ

By

Published : Mar 21, 2020, 11:56 PM IST

ಬೆಂಗಳೂರು:ನಗರದಲ್ಲಿ ದಿನೇ ದಿನೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಅದು ಕೂಡ ಮಾರ್ಚ್ 23ರಿಂದಲೇ ವೇಳಾಪಟ್ಟಿ ಬದಲಾವಣೆ ಆಗಲಿದ್ದು, ಮಾರ್ಚ್ 31ರವರೆಗೆ ಜಾರಿಯಲ್ಲಿ ಇರಲಿದೆ.

ನಿಗದಿತ ವರ್ಗಕ್ಕೆ ಮಾತ್ರ ಪ್ರಯಾಣ. ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಸೇವೆ ಸ್ಥಗಿತ ಸೇರಿದಂತೆ ಮೆಟ್ರೋ ಸೇವೆಯ ಸ್ವರೂಪವನ್ನು ಸಂಪೂರ್ಣ ಬದಲಿಸಿ ಬಿಎಂಆರ್​ಸಿಎಲ್​ ಆದೇಶ ಹೊರಡಿಸಿದೆ. ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಈ ಬಗೆಯ ಬದಲಾವಣೆ ತರಲಾಗಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ಮೆಟ್ರೊ ಸೇವೆಗಳನ್ನು ಪ್ರಾಥಮಿಕವಾಗಿ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಪೊಲೀಸ್ ಮತ್ತು ಇತರೆ ಭದ್ರತಾ ಸಿಬ್ಬಂದಿ, ವಿದ್ಯುತ್, ಸಾರಿಗೆ, ಪುರಸಭೆ ಹಾಗೂ ಸರಕಾರಿ ಸೇವೆಗಳಂತಹ ಅಗತ್ಯ ಸೇವೆಗಳನ್ನು ನೀಡುವವರು ಮಾತ್ರ ಬಳಸಬೇಕು. ಅಂತಹ ಎಲ್ಲಾ ಪ್ರಯಾಣಿಕರು ತಮ್ಮ ಇಲಾಖೆ ಒದಗಿಸಿದ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಬೇಕು ಎಂದು ನಿಗಮ ಸೂಚಿಸಿದೆ.

ನಮ್ಮ ಮೆಟ್ರೋ ವೇಳಾಪಟ್ಟಿ
ಸಾರ್ವಜನಿಕರು ತಮ್ಮ ಪ್ರಯಾಣ ತೀರಾ ಅನಿವಾರ್ಯವಾದಾಗ ಮಾತ್ರ ಮೆಟ್ರೋ ಬಳಸಬೇಕು. ಅಂತಹ ಪ್ರಯಾಣಿಕರು ಅನಿವಾರ್ಯಕ್ಕೆ ಕಾರಣ ತಿಳಿಸಲು ಸಂಬಂಧಿಸಿದ ಗುರುತಿನ ಚೀಟಿ ಅಥವಾ ಸಂಬಂಧಿತ ದಾಖಲೆಯನ್ನು ತೋರಿಸಿ ಪ್ರಯಾಣಿಸಬೇಕು ಎಂದು ನಿಗಮ ತಿಳಿಸಿದೆ. ಪ್ರತಿ ರೈಲಿನಲ್ಲಿ 150 ಮಂದಿ ಮಾತ್ರ ಪ್ರಯಾಣಿಸಬಹುದು. ಪರ್ಯಾಯ ಆಸನಗಳನ್ನು ಖಾಲಿ ಬಿಡಬೇಕು ಹಾಗೂ ಯಾರೂ ನಿಂತು ಪ್ರಯಾಣಿಸುವಂತಿಲ್ಲ. ನಿಲ್ದಾಣದಲ್ಲಿರುವ ಎಲ್ಲಾ ವಾಣಿಜ್ಯ ಮಳಿಗೆ, ಪಾರ್ಕಿಂಗ್ ಸ್ಥಳವನ್ನು ಮಾ. 31ರವರೆಗೆ ಮುಚ್ಚಲಾಗುತ್ತದೆ. ನಿಲ್ದಾಣದಲ್ಲಿ ಎರಡು ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮಾತ್ರ ತೆರೆಯಲಾಗುತ್ತದೆ.ಮಾರ್ಚ್ 23 ದಿಂದ ನಮ್ಮ ಮೆಟ್ರೋ ಸಂಚಾರ ವೇಳಾಪಟ್ಟಿ ಹೀಗಿದೆ..‌
  • ಬೆಳಗ್ಗೆ 6ರಿಂದ 8 ಗಂಟೆಯವರೆಗೆ 10 ನಿಮಿಷ ಅಂತರದಲ್ಲಿ ಅಗತ್ಯ ಸೇವೆಗಳಿಗೆ ಕೆಲಸ ಮಾಡುವ ವ್ಯಕ್ತಿಗಳಿಗೆ ಮಾತ್ರ.
  • ಬೆಳಗ್ಗೆ 8 ಗಂಟೆಯಿಂದ 10 ಗಂಟೆಗೆ 5 ನಿಮಿಷದ ಅಂತರದಲ್ಲಿ ಅನಿವಾರ್ಯ ಮತ್ತು ಅಗತ್ಯವಿರುವ ಪ್ರಯಾಣಿಕರಿಗೆ
  • ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಮತ್ತು ರಾತ್ರಿ 8ರಿಂದ ಮರುದಿನ ಬೆಳಗ್ಗೆ 6 ಗಂಟೆವರೆಗೆ ಸೇವೆ ಸ್ಥಗಿತ.
  • ಸಂಜೆ 4 ರಿಂದ 5 ಗಂಟೆವರೆಗೆ 10 ನಿಮಿಷ ಅಂತರದಲ್ಲಿ ಸೇವೆ ಇರಲಿದೆ.
  • ಸಂಜೆ 5 ರಿಂದ 7 ಗಂಟೆವರೆಗೆ 5 ನಿಮಿಷ ಅಂತರದಲ್ಲಿ ಸೇವೆ ಇರಲಿದೆ.
  • ಸಂಜೆ 7 ರಿಂದ ರಾತ್ರಿ 8 ಗಂಟೆವರೆಗೆ 10 ನಿಮಿಷ ಅಂತರದಲ್ಲಿ ಸೇವೆ‌ ಇರಲಿದೆ

ABOUT THE AUTHOR

...view details