ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಎರಡನೇ ಬಲಿ ಪಡೆದಿದೆ. ಚಿಕ್ಕಬಳ್ಳಾಪುರದ ಮಹಿಳೆ ಕೊರೊನಾದಿಂದ ಮೃತಪಟ್ಟಿರುವುದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ.
ಇಂದು ನಾಲ್ಕು ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದಲ್ಲದೆ, ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.
ಇಂದು ಪತ್ತೆಯಾದ ನಾಲ್ಕು ಪ್ರಕರಣಗಳಲ್ಲಿ ಮೃತಪಟ್ಟ ಮಹಿಳೆಯ ವರದಿಯೂ ಕೂಡ ಒಂದು. ಚಿಕ್ಕಬಳ್ಳಾಪುರದಲ್ಲಿ 70 ವರ್ಷದ ಕೊರೊನಾ ಶಂಕಿತ ವೃದ್ಧೆ ಮೃತಪಟ್ಟಿದ್ದು ಸಾವಿನ ನಂತರ ವೈದ್ಯಕೀಯ ವರದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ರಾಜ್ಯದ ನಾಲ್ಕು ಸೋಂಕಿತರ ಟ್ರಾವೆಲ್ ಹಿಸ್ಟರಿ
4 ಹೊಸ ಸೋಂಕಿತರ ಟ್ಟಾವೆಲ್ ಹಿಸ್ಪರಿ ಬಿಡುಗಡೆ ರೋಗಿ 52: ಮೈಸೂರು ಜಿಲ್ಲೆಯ 35 ವರ್ಷದ ವಯಸ್ಸಿನ ಪುರುಷ ರೋಗಿಯ ಚಲನವಲನದಂತೆ ಅವರು ಯಾವುದೇ ಹೊರಗಿನ ಪ್ರದೇಶಕ್ಕೆ ತೆರಳಿರುವುದಿಲ್ಲ. ಮತ್ತು ಯಾವ ಕೋವಿಡ್-19 ಸಕಾರಾತ್ಮಕ ವ್ಯಕ್ತಿಯೊಂದಿಗೆ ಸಂಪರ್ಕ್ ಹೊಂದಿಲ್ಲ. ಆದರೆ, ನಂಜನಗೂಡಿನಲ್ಲಿರುವ ಒಂದು ಔಷಧ ಉತ್ಪಾದನಾ ಕೈಗಾರಿಕೆಯ ವೈದ್ಯಕೀಯ ತಂತ್ರಜ್ಞರೊಂದಿಗೆ ಸಂಪರ್ಕಕ್ಕೆ ಬಂದಿರುತ್ತಾರೆ. ಸದ್ಯ ರೋಗಿಗೆ ಸಂಬಂಧಪಟ್ಟ ಏಳು ಜನರನ್ನು ಪ್ರಾಥಮಿಕ ಚಿಕಿತ್ಸೆ ನಡೆಸಿ ಕ್ಯಾರಂಟೈನ್‌ನಲ್ಲಿ ಇಡಲಾಗಿದೆ.
ರೋಗಿ 53: ಚಿಕ್ಕಬಳ್ಳಾಪುರ ನಿವಾಸಿಯಾದ 70 ವಯಸ್ಸಿನ ಮಹಿಳೆಯೊಬ್ಬರು ಮೆಕ್ಕಾ, ಸೌದಿ ಅರೇಬಿಯಾಗೆ ಪ್ರಯಾಣ ಮಾಡಿರುವ ಮಾಹಿತಿ ಸಿಕ್ಕಿದೆ. ಮಾರ್ಚ್ 14 ರಂದು ಬೆಂಗಳೂರಿಗೆ ವಾಪಸಾಗಿದ್ದರು. ಮಾರ್ಚ್ 24 ರಂದು ಬೆಂಗಳೂರಿನ ನಿಯೋಜಿತ ಆಸ್ಪತ್ರೆಯೊಂದರಲ್ಲಿ ಮರಣ ಹೊಂದಿದ್ದರು. ಭಾರತ ಸರ್ಕಾರದ ಕೋವಿಡ್-19 ಮಾರ್ಗಸೂಚಿ ಅನ್ವಯ ಅಂತ್ಯ ಕ್ರಿಯೆಯನ್ನು ನಡೆಸಲಾಗಿದೆ.
ರೋಗಿ 54: ಆಂಧ್ರಪ್ರದೇಶದ ಅನಂತಪುರದ 64 ವರ್ಷದ ಪುರುಷ, ಫ್ರಾನ್ಸ್ ದೇಶಕ್ಕೆ ಪ್ರಯಾಣ ಮಾಡಿರುವ ಹಿನ್ನಲೆಯನ್ನು ಹೊಂದಿದ್ದಾನೆ. ಮಾರ್ಚ್ 1 ರಂದು ಭಾರತಕ್ಕೆ ವಾಪಸಾಗಿದ್ದಾರೆ. ನಂತರ ಅವರು ಹಿಮಾಚಲಪ್ರದೇಶ, ಪುಟ್ಟಪರ್ತಿ ಮೂಲಕ ಮಾರ್ಚ್ 21 ರಂದು ಬೆಂಗಳೂರಿಗೆ ವಾಪಸಾಗಿರುತ್ತಾರೆ. ಈ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 55: ಇವರು ಬೆಂಗಳೂರಿನ ನಿವಾಸಿಯಾದ 45 ವಯಸ್ಸಿನ ಪುರಷನಾಗಿದ್ದು ಹಾಗೂ ರೋಗಿ 25 ರ ಸಂಪರ್ಕಿತ ವ್ಯಕ್ತಿಯಾಗಿರುತ್ತಾರೆ (ಸೆಕ್ಯುರಿಟಿ ಗಾರ್ಡ್). ಈ ರೋಗಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದ್ದು, ಬೆಂಗಳೂರು ಜಿಲ್ಲೆಯ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.