ಕರ್ನಾಟಕ

karnataka

ಆಗಸ್ಟ್ 15ರೊಳಗೆ ಇಲಾಖೆ ಕಚೇರಿಗಳನ್ನು ಇ-ಕಚೇರಿಯನ್ನಾಗಿ ಪರಿವರ್ತಿಸಿ: ಸಚಿವ ನಿರಾಣಿ ಸೂಚನೆ

By

Published : Jul 3, 2022, 6:46 AM IST

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಎಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆಯಿದ್ದಂತೆ. ಏನೇ ಹೊಸ ಆವಿಷ್ಕಾರಗಳು, ಸಂಶೋಧನೆಗಳು ನಡಯುವುದಿದ್ದರೆ ಮೊದಲು ನಮ್ಮ ಇಲಾಖೆಯಿಂದಲೇ ನಡೆಯಬೇಕು. ಇಂತಹ ಸಂದರ್ಭದಲ್ಲಿ ನಮ್ಮ ಇಲಾಖೆಯ ಕಚೇರಿಗಳು ಇ-ಕಚೇರಿಗಳು ಆಗದಿದ್ದರೆ ಹೇಗೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಧಿಕಾರಿಗಳನ್ನ ಪ್ರಶ್ನಿಸಿದರು.

ಸಚಿವ ನಿರಾಣಿ
ಸಚಿವ ನಿರಾಣಿ

ಬೆಂಗಳೂರು: ಆಗಸ್ಟ್ 15 ರೊಳಗೆ ವಾಣಿಜ್ಯ ಕೈಗಾರಿಕಾ ಇಲಾಖೆ ವ್ಯಾಪ್ತಿಗೆ ಒಳಪಡುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಚೇರಿಗಳನ್ನು ಇ-ಕಚೇರಿಗಳನ್ನಾಗಿ ಪರಿವರ್ತಿಸಬೇಕು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶನಿವಾರ ವಿಕಾಸೌಧದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರು, ಎಸ್ಎಲ್‍ಒಗಳು, ಕೆಎಸ್‍ಎಸ್‍ಐಡಿಸಿ ಅಧಿಕಾರಿಗಳನ್ನು ಒಳಗೊಂಡ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಗಡುವಿನೊಳಗೆ ಜಿಲ್ಲಾ ಮಟ್ಟದ ಕಚೇರಿಗಳನ್ನು ಇ-ಕಚೇರಿ ವ್ಯವಸ್ಥೆಗಳನ್ನಾಗಿ ಪರಿವರ್ತನೆ ಮಾಡದಿದ್ದರೆ ಮುಖ್ಯ ಕಚೇರಿಗೆ ಬರುವ ಭೌತಿಕ ಕಡತಗಳನ್ನು ಸ್ವೀಕಾರ ಮಾಡುವುದಿಲ್ಲ.

ಕಂಪ್ಯೂಟರ್ ಇಲ್ಲ, ಸಿಬ್ಬಂದಿ ಇಲ್ಲ, ಕಚೇರಿ ಇಲ್ಲ ಎಂಬ ಸಬೂಬುಗಳನ್ನು ಹೇಳಬಾರದು. ಇದಕ್ಕೆ ಬೇಕಾದ ಪೂರ್ವಸಿದ್ಧತೆಗಳನ್ನು ಇಂದಿನಿಂದಲೇ ತಯಾರು ಮಾಡಿಕೊಳ್ಳಿ. ಇಲ್ಲದಿದ್ದರೆ ಜಿಲ್ಲಾ ಮತ್ತು ತಾಲೂಕು ಮಟ್ಟದಿಂದ ಬರುವ ಭೌತಿಕ ಕಡತಗಳನ್ನು ಹಿಂದಕ್ಕೆ ಕಳುಹಿಸುವುದಾಗಿ ಅಧಿಕಾರಿಗಳಿಗೆ ನಿರಾಣಿ ಎಚ್ಚರಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಎಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆಯಿದ್ದಂತೆ. ಏನೇ ಹೊಸ ಆವಿಷ್ಕಾರಗಳು, ಸಂಶೋಧನೆಗಳು ನಡಯುವುದಿದ್ದರೆ ಮೊದಲು ನಮ್ಮ ಇಲಾಖೆಯಿಂದಲೇ ನಡೆಯಬೇಕು. ಇಂತಹ ಸಂದರ್ಭದಲ್ಲಿ ನಮ್ಮ ಇಲಾಖೆಯ ಕಚೇರಿಗಳು ಇ-ಕಚೇರಿಗಳು ಆಗದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಸಣ್ಣಪುಟ್ಟ ದೋಷಗಳನ್ನು ಮುಂದಿಟ್ಟುಕೊಂಡು ಕಡತ ವಿಲೇವಾರಿಯನ್ನು ವಿಳಂಬ ಮಾಡಬೇಡಿ. ವಿಳಂಬ ಮಾಡಿದರೆ ಉದ್ದಿಮೆದಾರರು ಕರ್ನಾಟಕಕ್ಕೆ ಬರಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು. ವಿಳಂಬವಾದಷ್ಟು ಉದ್ಯಮಿಗಳು ಬೇರೆ ರಾಜ್ಯದೆಡೆ ಗಮನಹರಿಸುತ್ತಾರೆ. ಇದಕ್ಕೆ ಅವಕಾಶ ನೀಡಬೇಡಿ ಎಂದರು.

ಜಿಲ್ಲಾ ಮಟ್ಟದಲ್ಲಿ ಕೈಗಾರಿಕಾ ಉದ್ದೇಶಗಳಿಗೆ ಅನೇಕ ವರ್ಷಗಳಿಂದ ಜಮೀನು ಪಡೆದವರು ಅದನ್ನು ಸದ್ಬಳಕೆ ಮಾಡಿಕೊಂಡಿಲ್ಲ. ಈ ಬಗ್ಗೆ ನನಗೆ ಸಾಕಷ್ಟು ಲಿಖಿತ ದೂರುಗಳು ಬಂದಿವೆ. ಹೀಗಾಗಿ, ಎಲ್ಲೆಲ್ಲಿ ಜಮೀನನ್ನು ಬಳಕೆ ಮಾಡಿಲ್ಲವೋ ಅದನ್ನು ತಕ್ಷಣವೇ ಆಡಿಟ್ ಮಾಡುವಂತೆ ಅಕಾರಿಗಳಿಗೆ ನಿರಾಣಿ ಸೂಚಿಸಿದರು. ಕೆಐಎಡಿಬಿಯಿಂದ ಜಮೀನು ಪಡೆದುಕೊಂಡು ಕೈಗಾರಿಕೆಗಳನ್ನು ಸ್ಥಾಪನೆ ಮಾಡದೇ ಹಾಗೆ ಉಳಿಸಿಕೊಂಡಿದ್ದಾರೆ. ಅಂತಹ ಜಮೀನನ್ನು ತಕ್ಷಣವೇ ಗುರುತಿಸಬೇಕು. ಬಳಕೆಯಾಗದ ಭೂಮಿಯನ್ನು ನಾವು ಹಿಂಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

90 ದಿನದೊಳಗೆ ಪರಿಹಾರ ನೀಡಿ: ರೈತ ಭೂಕಂದಾಯ ದಾಖಲೆಗಳು ಕಾನೂನಾತ್ಮಕವಾಗಿದ್ದರೆ, ಕೆಐಎಡಿಬಿಯಿಂದ ಸ್ವಾಧೀನಮಾಡಿಕೊಂಡ ಜಮೀನುಗಳಿಗೆ ಮೂರು ತಿಂಗಳಲ್ಲಿ ಪರಿಹಾರ ನೀಡಬೇಕು. ಕೆಲವು ಕಡೆ ಜಮೀನನ್ನು ಸ್ವಾಧೀನಪಡಿಸಿಕೊಂಡರೂ ರೈತರಿಗೆ ಪರಿಹಾರ ನೀಡದೆ ವಿಳಂಬ ಮಾಡಿಲಾಗಿದೆ ಎಂಬ ಆರೋಪವಿದೆ‌. ದಾಖಲೆಗಳು ಸರಿ ಇದ್ದರೆ, 90 ದಿನದೊಳಗೆ ಪರಿಹಾರ ನೀಡಲು ಇರುವ ಸಮಸ್ಯೆಯಾದರೂ ಏನು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಇತ್ತೀಚೆಗೆ ಸಣ್ಣ ಕೈಗಾರಿಕೆ ಇಲಾಖೆಗೂ ಭೂಮಿ ನೀಡುವಂತೆ ಮನವಿ ಬಂದಿದೆ. ಕೆಎಐಡಿಬಿಯಲ್ಲಿ ನಮಗೆ ಜಮೀನು ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿರಾಣಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ:ರಾಜ್ಯಕ್ಕೆ ಮೋದಿ ಸರ್ಕಾರ ಕೊಟ್ಟಷ್ಟು ಅನುದಾನ, ಬೆಂಬಲ ಬೇರಾವ ಸರ್ಕಾರಗಳೂ ಕೊಟ್ಟಿಲ್ಲ: ಜೋಶಿ

ABOUT THE AUTHOR

...view details