ಬೆಂಗಳೂರು: ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಕ್ಷೇಮಾಭಿವೃದ್ಧಿ ಸಂಘಗಳು ಕರೆ ಕೊಟ್ಟಿರುವ "ಜನಾಗ್ರಹ ಆಂದೋಲನ"ವನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಪಕ್ಷದ ಬೆಂಬಲವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಜನಾಗ್ರಹ ಆಂದೋಲನ ಮೇ 24 ಮತ್ತು 26ರಂದು ಕರೆ ಕೊಟ್ಟಿರುವ ಹೋರಾಟಕ್ಕೆ ಬೆಂಬಲ ಇದೆ. ಬಡವರು, ರೈತರು, ನಿರುದ್ಯೋಗಿಗಳು, ಅನಾಥರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಎಲ್ಲರಿಗೂ ಸರ್ಕಾರ ನೀಡಬೇಕೆಂದು ಅವರು ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ಪ್ರತಿಪಕ್ಷ ಕಾಂಗ್ರೆಸ್ ಬೆಂಬಲಿಸಲಿದೆ. ಇವರನ್ನು ಬೆಂಬಲಿಸಿಸುವುದು ಮಾತ್ರವಲ್ಲ, ಇವರ ಬೇಡಿಕೆಯೇ ನಮ್ಮ ಬೇಡಿಕೆ ಸಹ ಆಗಿದೆ ಎಂದಿದ್ದಾರೆ.
ಹೋರಾಟ ವಿವರ:
ಜನಾಗ್ರಹ ಆಂದೋಲನವು ಎರಡು ದಿನ ಎರಡು ಪ್ರತಿಭಟನೆ ಹಮ್ಮಿಕೊಂಡಿದೆ. ಮೇ 24ರಂದು ಜೀವ ಮತ್ತು ಜೀವನೋಪಾಯದ ಪ್ಯಾಕೇಜ್ಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರಾಜ್ಯವ್ಯಾಪಿ ಜನಾಗ್ರಹ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9ರಿಂದ 9.30ರ ನಡುವೆ ನಮ್ಮ ನಮ್ಮ ಮನೆಯ ಬೀದಿಗಳಲ್ಲಿ ಖಾಲಿ ತಟ್ಟೆ, ಖಾಲಿ ಚೀಲ ಮತ್ತು “ನಾವು ಬದುಕಬೇಕು’ ಫಲಕ ಹಿಡಿದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಇನ್ನು ಮೇ 26ರಂದು ಅರ್ಧ ವರ್ಷ ಪೂರೈಸುತ್ತಿರುವ ರೈತಾಂದೋಲನ ಬೆಂಬಲಿಸಿ ಹಾಗೂ ಏಳು ವರ್ಷ ಪೂರೈಸುತ್ತಿರುವ ಮೋದಿ ದುರಾಡಳಿತ ಖಂಡಿಸಿ ದೇಶವ್ಯಾಪಿ ಕರಾಳ ದಿನಾಚರಣೆ ಹಮ್ಮಿಕೊಂಡಿದ್ದು, ಅಂದು ಕಪ್ಪು ಮಾಸ್ಕ್ ಧರಿಸಿ, ಕಪ್ಪು ಬಾವುಟವನ್ನು ಮನೆ, ಕಚೇರಿ ಹಾಗೂ ಹೊಲಗಳಲ್ಲಿ ಹಾರಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.