ಬೆಂಗಳೂರು: ಕಾಂಗ್ರೆಸ್ ನಾಯಕರ ಜೊತೆ ಫೋಟೋ ತೆಗೆಸಿಕೊಳ್ಳುವವರೆಲ್ಲಾ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ ಎಂದಲ್ಲ ಅಂತ ಕಾಂಗ್ರೆಸ್ ಪಕ್ಷ ಅಭಿಪ್ರಾಯ ಪಟ್ಟಿದೆ.
ಬಿಜೆಪಿಯ ಟ್ವೀಟ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಕೇವಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ದಿವ್ಯಾ ಹಾಗರಗಿಯ ಫೋಟೋ ಮಾತ್ರವಲ್ಲ, ನಿಮ್ಮ ಪಕ್ಷದ ಬಹುತೇಕ ನಾಯಕರ ಫೋಟೋಗಳೂ ಇವೆ. ಹಾಗೆಂದ ಮಾತ್ರಕ್ಕೆ ಅವರೆಲ್ಲ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ ಎಂದು ಉಚ್ಛಾಟಿಸುವಿರಾ? ನಿಮ್ಮ ನಾಯಕರೇ ಆಕೆಯ ಮನೆಯನ್ನು ಹುಡುಕಿ ಹೋಗಿ ಆತಿಥ್ಯ ಸ್ವೀಕರಿಸಿದ್ದು ಯಾವ ಕಾರಣಕ್ಕೆ, ಆಕೆಯ ಬಂಧನವಾಗದಿರುವುದು ಏಕೆ? ಎಂದು ಪ್ರಶ್ನಿಸಿದೆ.
ಸಚಿವರೊಬ್ಬರನ್ನು ಶಿಕ್ಷಣ ಸಂಸ್ಥೆಗಳ ಮಾಲೀಕರ ನಿಯೋಗ ಭೇಟಿ ಮಾಡುವುದಕ್ಕೂ, ಸಚಿವರೇ ಅಕ್ರಮಗಳ ಆರೋಪಿಯೊಬ್ಬರ ಮನೆಗೆ ಹೋಗಿ ಗೋಡಂಬಿ ದ್ರಾಕ್ಷಿ ತಿಂದು ಬರುವುದಕ್ಕೂ ವ್ಯತ್ಯಾಸವಿದೆ. ರಾಜ್ಯ ಬಿಜೆಪಿ, ಬಾಲಿಶವಾಗಿ ಇಂತಹ ಫೋಟೋಗಳನ್ನು ಟೂಲ್ ಕಿಟ್ ಆಗಿ ಬಳಸಿ ಹಾಸ್ಯಕ್ಕೀಡಾಗಬೇಡಿ. ಆಕೆಯ ಬಂಧನದಿಂದ ರಕ್ಷಿಸುತ್ತಿರುವ ನಿಮ್ಮ ನಾಯಕರು ಯಾರು ಹೇಳಿ? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ಪಿಎಸ್ಐ ಹಗರಣದ ಕಥೆ, ಚಿತ್ರಕಥೆ ಸಿದ್ಧವಾಗಿದ್ದೇ ಕೆಪಿಸಿಸಿ ಕಚೇರಿಯಲ್ಲಿ: ಬಿಜೆಪಿ
ಹಗರಣದ ನಿರ್ಮಾಣ, ನಿರ್ದೇಶನ, ಚಿತ್ರಕತೆ, ಸಂಭಾಷಣೆ ಎಲ್ಲವೂ ಸಿದ್ಧವಾಗಿದ್ದು ಕೆಪಿಸಿಸಿ ಕಚೇರಿಯಲ್ಲೇ? ಪಿಎಸ್ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ! ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಆರೋಪಿ ದಿವ್ಯಾ ಹಾಗರಗಿ ಇರುವ ಫೋಟೋ ಪ್ರಕಟಿಸಿ ಬಿಜೆಪಿ ಟೀಕಿಸಿತ್ತು. ಇದಕ್ಕೆ ಕಾಂಗ್ರೆಸ್ ಪಕ್ಷ ತನ್ನ ಪ್ರತಿಕ್ರಿಯೆಯನ್ನು ಟ್ವೀಟ್ ಮೂಲಕವೇ ನೀಡಿದೆ.