ಬೆಂಗಳೂರು:ನಾಗರಿಕರ ಮೇಲೆ ಬಿಬಿಎಂಪಿ ಅನೇಕ ರೀತಿಯ ತೆರಿಗೆ ಹೊರೆಯನ್ನು ವಿಧಿಸುತ್ತಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನೆಡೆಯಿತು. ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಪಾದಯಾತ್ರೆ ಮೂಲಕ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬೆಂಗಳೂರು ನಗರದಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡುತ್ತಿದ್ದೇವೆ. ಇದಾದ ಬಳಿಕ 150 ಕ್ಷೇತ್ರಗಳಲ್ಲಿ ಹೋರಾಟ ಮಾಡುವ ಗುರಿ ಇದ್ದು, ಪ್ರತೀ ವಿಧಾನಸಭಾ ಕ್ಷೇತ್ರಲ್ಲಿನ ಸಮಸ್ಯೆ ಆಲಿಸುತ್ತೇವೆ ಎಂದರು.
ಜನರಿಗೆ ಉದ್ಯೋಗ ಇಲ್ಲ, ಬ್ಯಾಂಕ್ ಮೂಲಕ ಹಣ ಸಹಾಯ ಮಾಡೋದಾಗಿ ಹೇಳಿದ್ದೀರಿ. ಆದರೆ ಯಾರಿಗೂ ತಲುಪಿಲ್ಲ. ಬಡ ಜನರಿಗಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದ್ದೆವು. ಆದರೆ ಕಾಂಗ್ರೆಸ್ ಯೋಜನೆಯನ್ನೇ ಹಳ್ಳಹಿಡಿಸಿದರು. ಇದಕ್ಕಾಗಿ ಇಡೀ ವರ್ಷ ಹೋರಾಟವನ್ನು ಮುಂದುವರೆಸುತ್ತೇವೆ. ಈ ಸರ್ಕಾರದಲ್ಲಿ ನಡೆಯುತ್ತಿರೋ ಭ್ರಷ್ಟಾಚಾರ, ಸಿಎಂ, ಸಚಿವರು ಮಾಡುತ್ತಿರುವ ವಂಚನೆ ಬಯಲಿಗೆಳೆಯುತ್ತೇವೆ ಎಂದು ಕಿಡಿಕಾರಿದರು.
ಬಿಬಿಎಂಪಿ ಮುತ್ತಿಗೆ ಹಾಕಿದ ಡಿಕೆಶಿ, ಬೆಂಬಲಿಗರು ಬಿಬಿಎಂಪಿಯಲ್ಲಿ ಜಾಹೀರಾತು ನೀತಿ ತರಲಿಲ್ಲ, ಆರ್ಥಿಕ ಹೆಚ್ಚಳಕ್ಕೆ ಪ್ಲಾನ್ ಮಾಡಿಲ್ಲ, ಕಾರ್ಪೊರೇಷನ್ ಎಲೆಕ್ಷನ್ ಮಾಡೋಕು ತಯಾರಿಲ್ಲ, ಜನರ ಕಷ್ಟ ಕೇಳೋ ಅರಿವು ನಿಮಗಿಲ್ಲ. ಯಾರ್ಯಾರು ಬಡವರು, ಬೀದಿ ವ್ಯಾಪಾರಿಗಳಿದ್ದಾರೆ ಅವರಿಗೆ ತಿಂಗಳಿಗೆ 5 ಸಾವಿರ ರೂ. ಹಣ ನೀಡಬೇಕು. ಅವರ ಮನೆ ಬಾಗಿಲಿಗೆ ತೆರಳಿ 6 ತಿಂಗಳು ಹಣ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ರಿಜ್ವಾನ್ ಅರ್ಷದ್, ಮಾಜಿ ಮೇಯರ್ ಮಂಜುನಾಥ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.