ಬೆಂಗಳೂರು :ಮಹಾನಗರ ಸಂಪೂರ್ಣ ಸ್ತಬ್ಧಗೊಂಡಿದೆ. ಎರಡು ದಿನ ರಾಜ್ಯ ಕಾಂಗ್ರೆಸ್ ನಾಯಕರು ಕೇವಲ ಆಡಳಿತ ಪಕ್ಷದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದಾರೆ. ಅಷ್ಟೇ ಅಲ್ಲ, ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿ ಮುಂದಿನ ಹೆಜ್ಜೆ ಇರಿಸಲು ತೀರ್ಮಾನಿಸಿದ್ದಾರೆ.
ರಾಜ್ಯ ಸರ್ಕಾರ ಕೈಗೊಂಡಿರುವ ವಾರಾಂತ್ಯ ಕರ್ಫ್ಯೂ ಹಾಗೂ ಮುಂದಿನ ದಿನಗಳಲ್ಲಿ ವಿಧಿಸಲು ಉದ್ದೇಶಿಸುತ್ತಿರುವ ಲಾಕ್ಡೌನ್ ವಿಚಾರವಾಗಿ ಪ್ರತಿರೋಧ ಒಡ್ಡುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಕಳೆದ ಎರಡು ದಿನದಿಂದ ಮಾಡಿದೆ.
ವಾಹನ ಸವಾರರನ್ನು ತಡೆದು ಪೊಲೀಸರು ನಡೆಸಿದ ವಿಚಾರಣೆ, ಅಮಾಯಕರಿಗೆ ಓಡಾಟಕ್ಕೆ ಉಂಟಾದ ತೊಂದರೆ, ಅಘೋಷಿತ ಲಾಕ್ಡೌನ್ ಮಾದರಿಯ ಸ್ಥಿತಿ ನಿರ್ಮಿಸಿ, ವಾರಾಂತ್ಯ ಕರ್ಫ್ಯೂವನ್ನು ಲಾಕ್ಡೌನ್ ಮಾದರಿಗೆ ಪರಿವರ್ತಿಸಿದ್ದನ್ನು ಖಂಡಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಹಿಂದೆ ಲಾಕ್ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇತ್ತು. ಆದರೆ, ಈ ಸಾರಿ ಕೇವಲ ಔಷಧ ಮಳಿಗೆ ಹಾಗೂ ಕೆಲ ಹೋಟೆಲ್ಗಳಿಂದ ಪಾರ್ಸಲ್ ವ್ಯವಸ್ಥೆ ಹೊರತುಪಡಿಸಿದರೆ ಬೇರೆ ಯಾವುದೇ ಅಗತ್ಯ ಪೂರೈಸಿಕೊಳ್ಳಲು ಜನ ಪರದಾಡಬೇಕಾಗಿ ಬಂದಿದೆ.
ಆಹಾರ ಪೂರೈಸುವವರು ಕೂಡ ದುಪ್ಪಟ್ಟು ಬೆಲೆ ಕೇಳುತ್ತಿದ್ದಾರೆ. ಈ ಎಲ್ಲಾ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್ ತೀರ್ಮಾನಿಸಿದೆ. ಇನ್ನೆರಡು ದಿನಗಳ ನಂತರ ಬರುವ ಕೋವಿಡ್ ಪಾಸಿಟಿವ್ ವರದಿಯನ್ನು ಗಮನಿಸಿ ಮುಂದಿನ ಹೋರಾಟಕ್ಕೆ ಅಣಿಯಾಗಲು ನಿರ್ಧರಿಸಿದೆ.