ಬೆಂಗಳೂರು: ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಉತ್ತರ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ಬಜೆಟ್ ವಿರೋಧಿಸಿ ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿತು.
ಬಜೆಟ್ ಚರ್ಚೆಯಲ್ಲಿ ಸಿಎಂ ಪ್ರತಿಕ್ರಿಯೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ ಜನರ ಬಗ್ಗೆ ಚಿಂತನೆ ಮಾಡಬೇಕಿರುವುದು ಬಹಳ ಮುಖ್ಯ. ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅದರಿಂದ ರಾಜ್ಯದ ಅಭಿವೃದ್ಧಿ ಮಾಡುತ್ತಿರುವುದಾಗಿ ಸಿಎಂ ಹೇಳಿದ್ದಾರೆ. ಕೇಂದ್ರ ಸರ್ಕಾರ ನೀಡುವ ಅನುದಾನ ನಮ್ಮ ರಾಜ್ಯದಿಂದ ಸಂಗ್ರಹಿಸಿದ ತೆರಿಗೆಯ ಹಣವೇ ಆಗಿದೆ. 15ನೇ ಹಣಕಾಸು ಆಯೋಗದಲ್ಲಿ ಅತಿ ಹೆಚ್ಚು ಅನ್ಯಾಯವಾಗಿರುವ ರಾಜ್ಯ ಕರ್ನಾಟಕ ಎಂದು ಅವರು ಹೇಳಿದ್ದಾರೆ. ಕೇಂದ್ರದಿಂದ ತೆರಿಗೆ ಹಾಗೂ ಅನುದಾನ 17 ಸಾವಿರ ಕೋಟಿ ರೂ. ಬರುತ್ತದೆ. ನಮ್ಮ ರಾಜ್ಯದಿಂದ 3 ಲಕ್ಷ ಕೋಟಿ ರೂ. ತೆರಿಗೆ ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
2017-18 ರಲ್ಲಿ 31 ಸಾವಿರ ಕೋಟಿ ರೂ. ಕೇಂದ್ರದ ತೆರಿಗೆ ಪಾಲಿನ ಹಣ ಬರುತ್ತಿತ್ತು. ಈಗ ಅದು 29 ಸಾವಿರ ಕೋಟಿಗೆ ಇಳಿದಿದೆ. ಎಸ್ ಜಿಡಿಪಿಯ ಶೇ.25 ಕ್ಕಿಂತ ಹೆಚ್ಚಿನ ಸಾಲ ಪಡೆಯಬಾರದು. ಎಸ್ ಜಿಡಿಪಿ ಪ್ರತಿವರ್ಷ ಹೆಚ್ಚಾಗುತ್ತಲೇ ಹೋಗುತ್ತದೆ. ನಮ್ಮ ಐದು ವರ್ಷದ ಆಡಳಿತದಲ್ಲಿ ಶೇ.20 ಮೀರಲೇ ಇಲ್ಲ. ಸಾಲ ಹೆಚ್ಚಾದಷ್ಟು ಬಡ್ಡಿ ಪ್ರಮಾಣ ಹೆಚ್ಚಾಗುತ್ತದೆ. ಮುಂದಿನ ವರ್ಷ 47 ಸಾವಿರ ಕೋಟಿ ರೂ. ಬಡ್ಡಿ ಕೊಡಬೇಕಾಗುತ್ತದೆ. ಅದಕ್ಕಾಗಿ ಅನಗತ್ಯ ವೆಚ್ಚ ಕಡಿಮೆ ಮಾಡಿ. ಹೆಚ್ಚುವರಿ ಹುದ್ದೆಗಳನ್ನು ರದ್ದುಗೊಳಿಸುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.