ಕರ್ನಾಟಕ

karnataka

ETV Bharat / city

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಿರೀಕ್ಷಿತ ಫಲ ನೀಡುತ್ತಿಲ್ಲ ಸಮಗ್ರ ಶಿಶು ಅಭಿವೃದ್ಧಿ ಯೋಜನೆ! - ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳು

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೆ ತರದ ಕಾರಣ ಅಂಗನವಾಡಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಂಗನವಾಡಿ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿವೆ.

Anganavadi children
ಅಂಗನವಾಡಿ ಮಕ್ಕಳು

By

Published : Aug 25, 2020, 3:54 PM IST

Updated : Aug 25, 2020, 7:28 PM IST

ಬೆಂಗಳೂರು: ಮಕ್ಕಳಲ್ಲಿನ ಸರ್ವತೋಮುಖ ಅಭಿವೃದ್ಧಿ ಜೊತೆಗೆ ಪೌಷ್ಟಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ 1975ರಲ್ಲಿ ಈ ಯೋಜನೆ ಜಾರಿಗೆ ತಂದರೂ ನಿರೀಕ್ಷಿತ ಯಶಸ್ಸನ್ನು ಕಾಣಲು ಸಾಧ್ಯವಾಗಿಲ್ಲ!

ಮಕ್ಕಳ ಸರ್ವತೋಮುಖ ಅಭಿವೃದ್ಧಿ, ಗರ್ಭಿಣಿ, ಬಾಣಂತಿಯರು ಹಾಗೂ ಆರು ವರ್ಷದೊಳಗಿನ ಶಿಶುಗಳ ಸಮಗ್ರ ಅಭಿವೃದ್ಧಿ ಈ ಯೋಜನೆಯ ಧೇಯ್ಯೋದ್ದೇಶವಾಗಿದೆ. ಆ ಮೂಲಕ ಶಿಶುಗಳ ಪೌಷ್ಟಿಕತೆ ಹೆಚ್ಚಿಸಿ, ಮರಣ ಪ್ರಮಾಣ ಕಡಿಮೆ ಮಾಡುವುದು ಮೂಲ ಉದ್ದೇಶವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆಯ ಆಧಾರ ಸ್ತಂಭವಾಗಿದ್ದಾರೆ.

ಮಕ್ಕಳ ಅರೋಗ್ಯ ತಪಾಸಣೆ, ಚುಚ್ಚುಮದ್ದು, ಪೂರಕ ಪೌಷ್ಟಿಕ ಆಹಾರ, ಶಾಲಾಪೂರ್ವ ಶಿಕ್ಷಣ, ಪೌಷ್ಟಿಕತೆ ಹಾಗೂ ಆರೋಗ್ಯ ಶಿಕ್ಷಣವನ್ನು ಈ ಯೋಜನೆಯಡಿ ನೀಡಲಾಗುತ್ತದೆ. ಪೂರಕ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ರಾಜ್ಯ ಸರ್ಕಾರ ಮಕ್ಕಳಿಗೆ ವಾರದಲ್ಲಿ 5 ದಿನ 150 ಎಂಎಲ್ ಕೆನೆಭರಿತ ಹಾಲು, 3-6 ವರ್ಷದ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ನೀಡಲಾಗುತ್ತಿದೆ.

ತೀವ್ರ ಅಪೌಷ್ಟಿಕ ಮಕ್ಕಳಿಗೆ ಹಾಗೂ ಹಿಂದುಳಿದ ಐದು ಜಿಲ್ಲೆಗಳಾದ ಯಾದಗಿರಿ, ಬೀದರ್, ಕಲಬುರಗಿ, ರಾಯಚೂರು ಮತ್ತು ಕೊಪ್ಪಳದಲ್ಲಿ ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ 3 ದಿನ ಮೊಟ್ಟೆ ಹಾಗೂ 3 ದಿನ 200 ಎಂಎಲ್ ಹಾಲು ನೀಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳು ಮತ್ತು ಇನ್ನು ತೀವ್ರ ನ್ಯೂನ್ಯತೆಯಿಂದ ಮಕ್ಕಳ ಪೌಷ್ಟಿಕ ಮಟ್ಟ ಸುಧಾರಿಸಿ ಸಾಮಾನ್ಯ ದರ್ಜೆಗೆ ತರಲು ವೈದ್ಯಾಧಿಕಾರಿಗಳ ಸೂಚನೆಯಂತೆ ಔಷಧೋಪಚಾರ ಹಾಗೂ ಚಿಕಿತ್ಸಾ ಆಹಾರಕ್ಕಾಗಿ ಪ್ರತಿ ಮಗುವಿಗೆ ವಾರ್ಷಿಕ ₹2000 ನೀಡಲಾಗುತ್ತಿದೆ.

ಗರ್ಭಿಣಿಯರು ಮತ್ತು ಬಾಣಂತಿಯರ ವಿವರ

ಅಂಗನವಾಡಿ ಕೇಂದ್ರಗಳಲ್ಲಿನ ಆಹಾರ ವಿತರಣೆ:ರಾಜ್ಯದಲ್ಲಿ ಒಟ್ಟು 65,960 ಅಂಗನವಾಡಿ ಕೇಂದ್ರಗಳಿದ್ದರೆ, ಸುಮಾರು 3,331 ಮಿನಿ ಅಂಗನವಾಡಿಗಳಿವೆ. ಅವುಗಳ ‌ಮೂಲಕ ಶಿಶುಗಳಿಗೆ ಪೌಷ್ಟಿಕ ಆಹಾರ, ಶಾಲಾಪೂರ್ವ ಶಿಕ್ಷಣವನ್ನು ನೀಡಲಾಗುತ್ತಿದೆ. ಜೂನ್ 2019ರ ಅಂಕಿ-ಅಂಶದ ಪ್ರಕಾರ 30 ಜಿಲ್ಲೆಗಳಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 39,04,280 ಆರು ತಿಂಗಳಿಂದ 6 ವರ್ಷದ ಮಕ್ಕಳು ದಾಖಲಾಗಿದ್ದಾರೆ. ಈ‌ ಪೈಕಿ ಸುಮಾರು 36,50,149 ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಸುಮಾರು 65,958 ಅಂಗನವಾಡಿ ಕೇಂದ್ರಗಳಲ್ಲಿ ಮಾತೃ ಪೂರ್ಣ ಯೋಜನೆಯಡಿ ಒಟ್ಟು ಗುರುತಿಸಲಾಗಿರುವ 9,20,076 ಬಾಣಂತಿ ಹಾಗೂ ಗರ್ಭಿಣಿಯರಲ್ಲಿ ಒಟ್ಟು 8,40,232 ಮಂದಿ ದಾಖಲಾಗಿದ್ದಾರೆ. ಅದರಲ್ಲಿ 6,34,083 ಮಹಿಳೆಯರು ಮಾತೃಪೂರ್ಣ ಯೋಜನೆಯಡಿ ಬಿಸಿಯೂಟಕ್ಕೆ ಹಾಜರಾಗಿದ್ದಾರೆ. ಅಂದರೆ‌ ಸುಮಾರು ಶೇ.75 ಗರ್ಭಿಣಿ ಹಾಗೂ ಬಾಣಂತಿಯರು ಯೋಜನೆಯ ಲಾಭ ಪಡೆದಿದ್ದಾರೆ. ಸುಮಾರು 65,000 ಅಂಗನವಾಡಿ ಕಾರ್ಯಕರ್ತೆಯರು ಮತ್ತು 60,500 ಅಂಗನವಾಡಿ ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ.

ಗರ್ಭಿಣಿಯರು ಮತ್ತು ಬಾಣಂತಿಯರ ವಿವರ

ಅಂಗನವಾಡಿ ಕೇಂದ್ರಗಳ ಪೈಕಿ 41,508 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿವೆ. ಪಂಚಾಯತ್​ ಕಟ್ಟಡದಲ್ಲಿ 1,527 ಅಂಗನವಾಡಿ ಕೇಂದ್ರಗಳು, ಮುದಾಯ ಭವನದಲ್ಲಿ 3,537, ಯುವಕ ಮಂಡಲದಲ್ಲಿ 152, ಮಹಿಳಾ ಮಂಡಲಗಳಲ್ಲಿ 94 ಕಾರ್ಯನಿರ್ವಹಿಸುತ್ತಿವೆ. ಶಾಲೆಗಳಲ್ಲಿ 4,266 ಕೇಂದ್ರಗಳು, ಬಾಡಿಗೆ ಕಟ್ಟಡಗಳಲ್ಲಿ 11,956 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂ 2,765 ಕೇಂದ್ರಗಳು ಪರ್ಯಾಯ ವ್ಯವಸ್ಥೆಗಳನ್ನು ಮಾಡಿವೆ.

ಯೋಜನೆ ನಿರೀಕ್ಷಿತ ಫಲ ನೀಡುವಲ್ಲಿ ವಿಫಲ:ಈ ಯೋಜನೆ ನಿರೀಕ್ಷಿತ ಫಲ ನೀಡುವಲ್ಲಿ ವಿಫಲವಾಗಿದೆ. ರಾಜ್ಯದ ಶಿಶು‌ಮರಣ ದರದಲ್ಲಿ ಇಳಿಕೆ‌‌‌ ಕಾಣದೇ ಇರುವುದು ಯೋಜನೆ ನಿರೀಕ್ಷಿತ ಫಲ ನೀಡುತ್ತಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ. ಇತ್ತೀಚಿಗಿನ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಪ್ರತಿ ಸಾವಿರ ಜನನಕ್ಕೆ 25 ಶಿಶುಗಳು ಮರಣ ಹೊಂದುತ್ತಿವೆ. ಅಂದರೆ ಈ ಮರಣ ಪ್ರಮಾಣದ ದರ 24 ರಿಂದ 25ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ವಾರ್ಷಿಕವಾಗಿ ಸುಮಾರು 10,000 ಶಿಶುಗಳು ಸಾವಿಗೀಡಾಗುತ್ತಿವೆ.

ಅಂಗನವಾಡಿ ಕೇಂದ್ರಗಳ ವಿವರ

ಆರೋಗ್ಯ ಇಲಾಖೆಯ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಹೆಚ್ಎಂಐಎಸ್) ಪ್ರಕಾರ 2015-2019ರಲ್ಲಿ ರಾಜ್ಯದಲ್ಲಿ 40 ಲಕ್ಷ ಜನಿಸಿದ ಶಿಶುಗಳಲ್ಲಿ 44,250 ಮರಣ ಹೊಂದಿವೆ. ಇದರಲ್ಲಿ ‌ಬೆಂಗಳೂರು ನಗರ ಅಗ್ರಗಣ್ಯವಾಗಿದ್ದು, ಸುಮಾರು 4,645 ಶಿಶುಗಳು ಮರಣ ಹೊಂದಿವೆ.

2019-20ರ ಅಂಕಿ-ಅಂಶದ ಪ್ರಕಾರ ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳು ಗರಿಷ್ಠ 22 ಶಿಶು ಮರಣ ದರ ಹೊಂದಿದೆ. ದಾವಣಗೆರೆ 21, ಹಾಸನ 20, ರಾಯಚೂರು 19 ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 13 ಶಿಶು ಮರಣ ಪ್ರಮಾಣ ದರ ಹೊಂದಿದೆ. ಅಂದರೆ ರಾಜ್ಯದಲ್ಲಿ ಪ್ರತಿ ದಿನ ಸರಾಸರಿ 30 ಶಿಶುಗಳು ಮರಣ ಹೊಂದುತ್ತಿವೆ. ರಾಜ್ಯದಲ್ಲಿ ಸುಮಾರು 6,26,000 ಶಿಶುಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಈಗಾಗಲೇ ಸುಮಾರು 39,60,000 ಶಿಶುಗಳ ತೂಕವನ್ನು ಮಾಡಲಾಗಿದೆ.

ಅಂಗನವಾಡಿ ಕೇಂದ್ರಗಳ ವಿವರ

ನಿರೀಕ್ಷಿತ ಫಲ ನೀಡದಿರಲು ಕಾರಣವೇನು?:ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ ನಿರೀಕ್ಷಿತ ಸಫಲತೆ ಕಾಣದಿರಲು ಹಲವು ಕಾರಣವಿದ್ದು, ಅದರಲ್ಲಿ ಪ್ರಮುಖ ಕಾರಣ ಸೌಲಭ್ಯ ಹಾಗೂ ಅನುದಾನದ ಕೊರತೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ ತಿಳಿಸಿದ್ದಾರೆ.

ಸರ್ಕಾರ ಈ ಯೋಜನೆಯನ್ನು ನಿರ್ಲಕ್ಷಿಸುತ್ತಾ ಬಂದಿದೆ. ಪಂಚವಾರ್ಷಿಕ ಯೋಜನೆಯಡಿ ಈ ಯೋಜನೆಯನ್ನು ಸದೃಢಗೊಳಿಸಲು ಹಲವು ಶಿಫಾರಸುಗಳನ್ನು ‌ಮಾಡಲಾಗಿದೆ. ಆದರೆ ಆ ಶಿಫಾರಸುಗಳನ್ನು ಜಾರಿಗೊಳಿಸುವ ಕೆಲಸ ಆಗಿಲ್ಲ. ಪ್ರತಿ ವರ್ಷ ಈ ಯೋಜನೆಗೆ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸರಣಿ ಸಮಸ್ಯೆಗಳನ್ನು ಎದುರಿಸುತ್ತಿವೆರಾಜ್ಯದಲ್ಲಿರುವ ಅಂಗನವಾಡಿಗಳು

ನಿಯಮದಂತೆ ಸಾವಿರ ಜನಸಂಖ್ಯೆಗೆ ಒಂದು ಅಂಗನವಾಡಿ ಕೇಂದ್ರ ಇರಬೇಕು. ಕನಿಷ್ಠ 40 ಫಲಾನುಭವಿಗಳಿಗೆ ಒಂದು ಅಂಗನವಾಡಿ ಇರಬೇಕು ಎಂದಿದೆ. ಅದರಂತೆ ಬೆಂಗಳೂರಲ್ಲಿ ಸುಮಾರು 1.30 ಕೋಟಿ ಜನಸಂಖ್ಯೆ ಇದೆ. ಆದರೆ, ಇಲ್ಲಿ ಇರುವುದು ಕೇವಲ 3,500 ಅಂಗನವಾಡಿ ಕೇಂದ್ರಗಳು.‌ ಅದೇ ರೀತಿ‌ ಕರ್ನಾಟಕದಲ್ಲಿ ಸುಮಾರು 6.30 ಕೋಟಿ ಜನಸಂಖ್ಯೆ ಇದೆ. ಅದಕ್ಕುನುಗುಣವಾಗಿ ಎಲ್ಲ ಕಡೆ ಅಂಗನವಾಡಿ ಇಲ್ಲ. ಇದರಿಂದ ಶಿಶುಗಳಿಗೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಈ ಯೋಜನೆಯ ಲಾಭ ತಲುಪುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿ ಅಂಗನವಾಡಿ ಕಟ್ಟಗಳ ಸಮಸ್ಯೆ ಇದ್ದು, ಸುಮಾರು ಶೇ.50ರಷ್ಟು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ. ಇನ್ನು ಹಲವು ಕಟ್ಟಡಗಳು ಸಣ್ಣ ಹಾಲಿನಂತಿದ್ದು, ಇಕ್ಕಟ್ಟಾದ ಪ್ರದೇಶದಲ್ಲಿ ಕೆಲಸ‌ ಮಾಡುವ ಪರಿಸ್ಥಿತಿ ಇದೆ. ಅದರ ಜೊತೆಗೆ ಕಾಲಕ್ಕೆ ತಕ್ಕಂತೆ ಅಂಗನವಾಡಿ ನೌಕರರಿಗೆ ತರಬೇತಿ ನೀಡುವುದು ನಿಂತು ಹೋಗಿದೆ. ಅನುದಾನ ಇಲ್ಲದೆ ಸಂಪೂರ್ಣವಾಗಿ ಯೋಜನೆ ಸಂಬಂಧ ತರಬೇತಿ ನೀಡುವುದು ಸ್ಥಗಿತವಾಗಿದೆ ಎಂದು ಎಸ್. ವರಲಕ್ಷ್ಮಿ ತಿಳಿಸಿದ್ದಾರೆ.

ಸಂಘಟನೆ ಪ್ರಮುಖರ ಹೇಳಿಕೆಗಳು

ಎಲ್ಲಾ ಅಂಗನವಾಡಿ‌ ಕೇಂದ್ರಗಳಲ್ಲಿ ತೂಕದ ಮಷಿನ್ ಇದೆ. ಪ್ರತಿ ತಿಂಗಳು ಶಿಶುಗಳನ್ನು ತೂಕ ಮಾಡಬೇಕು. 3-6 ವರ್ಷದಿಂದ ಹಾಗೂ 0-3 ವರ್ಷದ ಮಗುವನ್ನು ತೂಕ‌ ಮಾಡಬೇಕು. ಬಾಣಂತಿ ಮನೆಗೆ ಕೆಲವೊಮ್ಮೆ ತೂಕದ ಯಂತ್ರ ಕೊಂಡೊಯ್ದು ತೂಕ ಮಾಡಲಾಗುತ್ತದೆ. ಆದರೆ ನಮಗೆ ಬೇಕಾದ ಸೌಲಭ್ಯ, ವೇತನ, ಸಾಮಾಜಿಕ‌ ಭದ್ರತೆ ಇಲ್ಲವೆಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುನಂದಾ ತಿಳಿಸಿದ್ದಾರೆ.

Last Updated : Aug 25, 2020, 7:28 PM IST

ABOUT THE AUTHOR

...view details