ಕರ್ನಾಟಕ

karnataka

ETV Bharat / city

ಲಸಿಕೆಯಿಂದ ಯಾರಿಗೂ ವ್ಯತಿರಿಕ್ತ ಪರಿಣಾಮ ಬೀರಿಲ್ಲ: ಆಯುಕ್ತ ಮಂಜುನಾಥ್ ಪ್ರಸಾದ್

ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರ ಪಾಲಿಕೆಗೆ ನೀಡಿದ ಬಳಿಕ ಲಸಿಕೆಗಳನ್ನು ದಾಸಪ್ಪ ಆಸ್ಪತ್ರೆ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಿಡಲಾಗುತ್ತದೆ. ಆ ಬಳಿಕ ಲಸಿಕೆ ನೀಡುವ ಹಿಂದಿನ ದಿನ 141 ಕೋಲ್ಡ್ ಚೈನ್ ಪಾಯಿಂಟ್​​ಗಳಿಗೆ ದಾಸಪ್ಪ ಆಸ್ಪತ್ರೆಯಿಂದ ವಾಹನಗಳ ಮೂಲಕ ಕೋಲ್ಡ್ ಬಾಕ್ಸ್‌ಗಳಲ್ಲಿ ಕಳುಹಿಸಲಾಗುತ್ತದೆ..

commissioner-manjunath-prasad
ಆಯುಕ್ತ ಮಂಜುನಾಥ್ ಪ್ರಸಾದ್

By

Published : Jan 17, 2021, 3:17 PM IST

ಬೆಂಗಳೂರು :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ನಾಲ್ಕು ಆಸ್ಪತ್ರೆಗಳ ಸುಮಾರು 6,000 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಇಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಆಯುಕ್ತ ಮಂಜುನಾಥ್ ಪ್ರಸಾದ್

ಓದಿ: ಲಸಿಕೆ ಹಾಕಿಸಿಕೊಂಡವರು ಆಲ್ಕೋಹಾಲ್‌ ಸೇವಿಸಬಹುದೇ?: ಆರೋಗ್ಯ ಸಚಿವರು ಹೇಳಿದ್ದೇನು..

ಮಣಿಪಾಲ್ ಆಸ್ಪತ್ರೆಯಲ್ಲಿ 4,052 ಆರೋಗ್ಯ ಸಿಬ್ಬಂದಿಗಳಿದ್ದು, ಇಂದು ಮಣಿಪಾಲ್ ಆಸ್ಪತ್ರೆಯಲ್ಲಿ 43 ಸ್ಥಳಗಳನ್ನು ಗುರುತಿಸಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ ಎಂದು ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದರು.

ಮಣಿಪಾಲ್ ಆಸ್ಪತ್ರೆ ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ 11 ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳಲ್ಲಿ 1,376 ಸಿಬ್ಬಂದಿಗೆ, ಸೇಂಟ್ ಫಿಲೋಮಿನಾ ಮತ್ತು ನರ್ಸಿಂಗ್ ಕಾಲೇಜಿನಲ್ಲಿ 7 ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳಲ್ಲಿ 700 ಆರೋಗ್ಯ ಸಿಬ್ಬಂದಿ ಹಾಗೂ ಕಾಕ್ಸ್ ಟೌನ್ ಪಾಲಿಕೆಯ ಹೆರಿಗೆ ಆಸ್ಪತ್ರೆಯ 1 ಲಸಿಕಾ ಕೇಂದ್ರದಲ್ಲಿ 98 ಆರೋಗ್ಯ ಸೇವಾ ಸಿಬ್ಬಂದಿಗೆ ಇಂದು ಲಸಿಕೆ ನೀಡಲಾಗುತ್ತಿದೆ.

4 ಆಸ್ಪತ್ರೆಯಲ್ಲಿ ಒಟ್ಟು 6,226 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದ್ದು, ಸಂಜೆ 5.30 ರವರೆಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡುವುದರಿಂದ ಯಾರಿಗೂ ವ್ಯತಿರಿಕ್ತ ಪರಿಣಾಮ ಬೀರಿಲ್ಲವೆಂದು ಆಯುಕ್ತರು ತಿಳಿಸಿದರು.

ನಾಳೆ ಪಾಲಿಕೆ ವ್ಯಾಪ್ತಿಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 7,300 ಸಿಬ್ಬಂದಿಯಿದ್ದು, ನಾಳೆಯಿಂದ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಇದೇ ರೀತಿ ನಗರದಲ್ಲಿ 106 ಖಾಸಗಿ ಆಸ್ಪತ್ರೆಗಳಲ್ಲಿ 42,000 ಸಿಬ್ಬಂದಿ ಹಾಗೂ 9 ವೈದ್ಯಕೀಯ ಕಾಲೇಜುಗಳಲ್ಲಿ 28,000 ಸಿಬ್ಬಂದಿಗೆ ನಾಳೆಯಿಂದ ಲಸಿಕೆ ನೀಡಲು ಪ್ರಾರಂಭಿಸಲಾಗುತ್ತದೆ.

ಕೋವಿನ್ ಪೋರ್ಟಲ್‌ನಲ್ಲಿ ಆರೋಗ್ಯ ಕಾರ್ಯಕರ್ತರು ಇನ್ನೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಆರೋಗ್ಯ ಕಾರ್ಯಕರ್ತರು ನೋಂದಣಿ ಮಾಡಿಕೊಂಡ ಅಷ್ಟೂ ಫಲಾನುಭವಿಗಳಿಗೆ ಒಂದು ವಾರದಲ್ಲಿ ಲಸಿಕೆ ನೀಡಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಇದೀಗ ಪಾಲಿಕೆಗೆ 1,82,000 ಲಸಿಕೆಯಲ್ಲಿ ಈವರೆಗೆ 1,05,000 ಲಸಿಕೆ ಬಂದಿದ್ದು, 2ನೇ ಹಂತದಲ್ಲಿ ಉಳಿದ ಲಸಿಕೆ ಬರಲಿದೆ ಎಂದರು.

ಲಸಿಕೆ ನೀಡಲು ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಲಸಿಕೆ ಪಡೆಯುವವರು ಕಡ್ಡಾಯವಾಗಿ ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿರುವವರಿಗೆ ಒಟಿಪಿ ಹೋಗಿಲ್ಲವೆಂದರೆ ಆಫ್​​ಲೈನ್ ಮೂಲಕವೂ ನಿಖರ ಮಾಹಿತಿ ಸಂಗ್ರಹಿಸಿ ಲಸಿಕೆ ನೀಡಬಹುದಾಗಿದೆ. ಕೋವಿನ್ ಪೋರ್ಟಲ್ ಕಾರ್ಯನಿರ್ವಹಿಸದ ವೇಳೆ ಆಫ್​ಲೈನ್ ಮೂಲಕ ಮಾಹಿತಿ ಸಂಗ್ರಹಿಸಿಕೊಂಡು ತದನಂತರ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಬಹುದಾಗಿದೆ.

ನಿನ್ನೆ ಪಾಲಿಕೆ ವ್ಯಾಪ್ತಿಯ 6 ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು. ಅದರಲ್ಲಿ 475 ಮಂದಿಗೆ ಮಾತ್ರ ಸಂದೇಶ ಕಳುಹಿಸಲು ಸಾಧ್ಯವಾಗಿದೆ. 475 ಫಲಾನುಭವಿಗಳಲ್ಲಿ 345 ಮಂದಿ ಲಸಿಕೆ ಪಡೆದಿದ್ದಾರೆ. ಈ ಸಂಬಂಧ ಆರೋಗ್ಯ ಇಲಾಖೆ ಜೊತೆ ಮಾತನಾಡಿ ಮ್ಯಾನ್ಯುಯಲ್ ಮುಖಾಂತರವೂ ದಾಖಲಾತಿ ಸಂಗ್ರಹಿಸಿ ಫಲಾನುಭವಿಗಳಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರ ಪಾಲಿಕೆಗೆ ನೀಡಿದ ಬಳಿಕ ಲಸಿಕೆಗಳನ್ನು ದಾಸಪ್ಪ ಆಸ್ಪತ್ರೆ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಿಡಲಾಗುತ್ತದೆ. ಆ ಬಳಿಕ ಲಸಿಕೆ ನೀಡುವ ಹಿಂದಿನ ದಿನ 141 ಕೋಲ್ಡ್ ಚೈನ್ ಪಾಯಿಂಟ್​​ಗಳಿಗೆ ದಾಸಪ್ಪ ಆಸ್ಪತ್ರೆಯಿಂದ ವಾಹನಗಳ ಮೂಲಕ ಕೋಲ್ಡ್ ಬಾಕ್ಸ್‌ಗಳಲ್ಲಿ ಕಳುಹಿಸಲಾಗುತ್ತದೆ. ಲಸಿಕೆ ನೀಡುವ ದಿನ ಕೋಲ್ಡ್ ಚೈನ್ ಪಾಯಿಂಟ್‌ನಿಂದ ಲಸಿಕೆ ನೀಡುವ ಕೇಂದ್ರಗಳಿಗೆ ಅವಶ್ಯಕ ಲಸಿಕೆ ಕಳುಹಿಸಿಕೊಡಲಾಗುತ್ತದೆ ಎಂದರು.

ABOUT THE AUTHOR

...view details