ಬೆಂಗಳೂರು:ಬ್ರಿಗೇಡ್ ರಸ್ತೆ ಸೇರಿ ಹಲವೆಡೆ ಪಾನಮತ್ತರಾಗಿ ಕೆಲ ಯುವಕರು ಅಸಭ್ಯವಾಗಿ ವರ್ತಿಸಿದ ಸಣ್ಣಪುಟ್ಟ ಪ್ರಕರಣಗಳು ಬಿಟ್ಟರೆ ನಗರದಲ್ಲಿ ಹೊಸ ವರ್ಷದ ಸಂಭ್ರಮ ಅದ್ದೂರಿಯಾಗಿ ನಡೆಯಿತು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸಕ್ಕೆ ತೆರಳಿ ಹೊಸ ವರ್ಷದ ಶುಭಾಶಯ ಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಇದೆ. ನೂತನ ವರ್ಷದ ಆಚರಣೆಯಲ್ಲಿ ಅನುಚಿತವಾಗಿ ವರ್ತಿಸಿದವರ ಮಾಹಿತಿ, ಹಾಗೆಯೇ ಘಟನೆಗಳ ಕುರಿತು ವಿವರ ಸಂಗ್ರಹಿಸುತ್ತೇನೆ. ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡುತ್ತೇನೆ. ಈಗಾಗಲೇ ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ.. ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಬೆಳಗಾವಿಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚಿಸಿದ್ದೇನೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದದ ಕಾನೂನು ಹೋರಾಟದ ಕುರಿತಂತೆ ಶೀಘ್ರದಲ್ಲೇ ಸಿಎಂ ಯಡಿಯೂರಪ್ಪ ಅವರು ಸಭೆ ಕರೆಯುತ್ತಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸುವ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಈಗಾಗಲೇ ನ್ಯಾಯಮೂರ್ತಿ ಮಂಜುನಾಥ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿ ಹಾಗೂ ಅಡ್ವೊಕೇಟ್ ಜನರಲ್ ಹಾಗೂ ಆ ಭಾಗದ ಹಿರಿಯ ಸಚಿವರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಕಾನೂನು ಹೋರಾಟಕ್ಕೆ ರಾಜ್ಯವನ್ನು ಪ್ರತಿನಿಧಿಸಲು ವಕೀಲರನ್ನು ನೇಮಿಸಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ಮಹಾಜನ್ ವರದಿ ಪ್ರಕಾರ ವಿಷಯ ಬಗೆಹರಿದಿದೆ. ಆದರೆ, ರಾಜಕೀಯಕ್ಕಾಗಿ ಮಹಾರಾಷ್ಟ್ರ ಸಿಎಂ ಪದೇಪದೆ ಈ ಕ್ಯಾತೆ ತೆಗೆಯುತ್ತಿದ್ದಾರೆ. ಹಿಂದೆ ಶರದ್ ಪವಾರ್ ಅವರು ಈ ರೀತಿ ಕ್ಯಾತೆ ತೆಗೆಯುತ್ತಿದ್ರು. ಆ ಮೇಲೆ ಮಹಾರಾಷ್ಟ್ರ ಕರ್ನಾಟಕ ಗಡಿ ಸಮಸ್ಯೆ ಇಲ್ಲಿಗೆ ಮುಗೀತು ಎಂದು ಹೇಳಿಕೆ ಕೊಟ್ಟಿದ್ದರು. ಈಗ ಆ ಹೇಳಿಕೆಯನ್ನು ಉದ್ದವ್ ಠಾಕ್ರೆಗೆ ನೆನಪು ಮಾಡಿಕೊಡ್ತೇನೆ ಎಂದು ಸಚಿವ ಬೊಮ್ಮಾಯಿ ಹೇಳಿದರು.