ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಪುನಾರಚನೆ ವಿಷಯದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಟ್ಟು ಬಿಟ್ಟುಕೊಡುತ್ತಿಲ್ಲ. ಈ ವಿಚಾರದ ಕುರಿತು ಪ್ರತಿಕ್ರಿಯೆ ನೀಡದೆ ಜಾರಿಕೊಳ್ಳುತ್ತಿದ್ದಾರೆ.
ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗಾಗಿ ಆರ್.ಟಿ.ನಗರ ಖಾಸಗಿ ನಿವಾಸದಿಂದ ತಾಜ್ ವೆಸ್ಟ್ ಎಂಡ್ಗೆ ಮುಖ್ಯಮಂತ್ರಿ ತೆರಳಿದರು. ಈ ವೇಳೆ ಮಾಧ್ಯಮಗಳು ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಬಿಬಿಎಂಪಿ ಗುಪ್ತ ಬಜೆಟ್ ಬಗ್ಗೆ ಕೇಳುತ್ತಿದ್ದಂತೆ, ನಿನ್ನೆ ಬೆಳಗ್ಗೆ ಬಜೆಟ್ ಮಾಡಿದ್ದಾರೆ, ಸಂಜೆ ವೆಬ್ಸೈಟ್ಗೆ ಹಾಕಿದ್ದಾರೆ ಎಂದು ಕಾರಲ್ಲೇ ಕುಳಿತು ಹೇಳಿ ಹೊರಟರು.
ಸಾಮಾನ್ಯವಾಗಿ ಕಾರಿನಲ್ಲಿ ಕುಳಿತು ಸಿಎಂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ, ಕಾರಿನಿಂದ ಇಳಿದು ಬಂದು ಮಾತನಾಡುತ್ತಿದ್ದರು. ಆದರೆ ಇಂದು ಸಿಎಂ ಅಷ್ಟು ವ್ಯವಧಾನ ತೋರಲಿಲ್ಲ, ನೇರವಾಗಿ ಅಮಿತ್ ಶಾ ಭೇಟಿಗೆ ತೆರಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಲು ಸಿಎಂ ಬೊಮ್ಮಾಯಿ ಜೊತೆ ಗೃಹ ಸಚಿವ ಆರಗ ಜ್ಞಾನೇಂದ್ರ, ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಸೇರಿದಂತೆ ಇತರ ನಾಯಕರು ಆಗಮಿಸಿದರು. ಅಮಿತ್ ಶಾ ಜೊತೆ ಸಿಎಂ ಕೂಡ ತುಮಕೂರಿಗೆ ವಾಯುಪಡೆ ವಿಮಾನದಲ್ಲಿ ಪ್ರಯಾಣಿಸಲಿದ್ದು, ಪ್ರಯಾಣದ ವೇಳೆ ಮಹತ್ವದ ಮಾತುಕತೆ ನಡೆಯಬಹುದು ಎನ್ನಲಾಗಿದೆ.
ಇದನ್ನೂ ಓದಿ:'ಪರೀಕ್ಷಾ ಪೇ ಚರ್ಚಾ': ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಜೊತೆಗಿಂದು ಮೋದಿ ಸಂವಾದ