ಬೆಂಗಳೂರು:ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಎರಡು ವರ್ಷ ತುಂಬುತ್ತಿರುವ ಶುಭ ಮುಹೂರ್ತದಲ್ಲಿಯೇ ಅನಿರೀಕ್ಷಿತ ರಾಜಕೀಯ ವಿದ್ಯಮಾನಗಳ ಭಾಗವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಯಡಿಯೂರಪ್ಪನವರು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ಇತ್ತೀಚೆಗೆ ದೆಹಲಿಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿ ಬಳಿಕ ಸಿಎಂ ಸ್ಥಾನಕ್ಕೆ ವಿದಾಯ ಹೇಳುವ ತೀರ್ಮಾನಕ್ಕೆ ಬಂದಿದ್ದಾರೆಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಜುಲೈ 26ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಆಗಲಿದೆ. ಕಳೆದ 2019ರ ಜುಲೈ 26 ರಂದು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಇದೇ ಜುಲೈ 26ರಂದೇ. ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿಯೇ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ವಿದಾಯ ಭಾಷಣ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ.
ಈ ಹಿನ್ನೆಲೆಯಲ್ಲಿ ಜುಲೈ 25ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಕರೆದಿದ್ದಾರೆ. ಅಂದು ಬಿಜೆಪಿಯ ಎಲ್ಲಾ ಶಾಸಕರು ಮತ್ತು ಸಚಿವರಿಗೆ ಔತಣಕೂಟ ಸಹ ಏರ್ಪಡಿಸಲಾಗಿದ್ದು, ಈ ಸಭೆಯಲ್ಲಿ ಎರಡು ವರ್ಷ ಆಡಳಿತ ನಡೆಸಲು ಸಹಕಾರ ನೀಡಿದ ಶಾಸಕರಿಗೆ, ಸಚಿವರಿಗೆ ಧನ್ಯವಾದಗಳನ್ನು ಸಮರ್ಪಿಸಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:ಬೆಂಬಲಿಗರ ಪಡೆಯಿಲ್ಲ, ಆಪ್ತರ ಸುಳಿವಿಲ್ಲ: ಒಬ್ಬಂಟಿಯಾಗಿ ಕಾಲ ಕಳೆದ ಸಿಎಂ!