ಬೆಂಗಳೂರು: ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಥ ವಿಷಯಗಳ ಬಗ್ಗೆ ಮೊದಲು ಚರ್ಚೆಯಾಗುತ್ತದೆ, ಆಮೇಲೆ ಸ್ಥಳೀಯ ಮಟ್ಟಕ್ಕೆ ಬರುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಬೊಮ್ಮಾಯಿ ಇಂದು ವಿಧಾನಸೌಧ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ನಮನ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆಂಗಲ್ ಹನುಮಂತಯ್ಯ ಅವರ ತ್ಯಾಗದಿಂದ ಕರ್ನಾಟಕ ಒಂದಾಗಿದೆ. ಅವರು ಈ ನಾಡನ್ನು ಒಗ್ಗೂಡಿಸಿರುವ ಹಿರಿಯ ಚೇತನ. ದೂರದೃಷ್ಠಿಯ ಮಹತ್ವ ಹೇಳಿ ಕೊಟ್ಟ ಪುಣ್ಯಾತ್ಮ. ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಯನ್ನು ಅವರ ಊರಿನಲ್ಲಿ(ರಾಮನಗರ) ಈ ವರ್ಷವೇ ನಿರ್ಮಿಸುತ್ತೇವೆ ಎಂದು ತಿಳಿಸಿದರು.
ಅನುದಾನದ ಕೊರತೆ ಇಲ್ಲ: ಕೆಂಪೇಗೌಡರ ಪ್ರತಿಮೆ ಕಾಮಗಾರಿ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತೇವೆ. ಅದಕ್ಕೆ ಯಾವುದೇ ಅನುದಾನದ ಕೊರತೆಯಾಗಲ್ಲ. ಮಾಜಿ ಸಿಎಂ ಯಡಿಯೂರಪ್ಪನವರು ಘೋಷಿಸಿದ ಕಾಲದ ಮಿತಿಯಲ್ಲೇ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.