ಬೆಂಗಳೂರು: ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಸಂಬಂಧ ಇಂದು ಸಂಜೆ ಶಿಕ್ಷಣ ಸಚಿವರು ಮತ್ತು ಗೃಹ ಸಚಿವರ ಜೊತೆ ಸಭೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಾಲಾ ಕಾಲೇಜು ರಜೆ ವಿಸ್ತರಣೆ ಬಗ್ಗೆ ಸಂಜೆ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಶಾಲಾ ಕಾಲೇಜುಗಳಲ್ಲಿ ಮೊದಲಿನ ರೀತಿ ಶಾಂತಿ ಸೌಹಾರ್ದತೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಹಿಜಾಬ್, ಕೇಸರಿ ಶಾಲು ವಿವಾದದ ವಿಚಾರಣೆಗೆ ಹೈಕೋರ್ಟ್ ತ್ರಿಸದಸ್ಯ ಪೀಠ ರಚಿಸಿದೆ. ಇಂದು ಅರ್ಜಿಗಳ ವಿಚಾರಣೆ ನಡೆಯಲಿದೆ. ಶಾಲೆಗಳಲ್ಲಿ ಸಮಸ್ಯೆ ಆಗದಂತೆ ರಜೆ ಘೋಷಣೆ ಮಾಡಿದ್ದೇವೆ. ಹೊರಗಿನ ಸಂಘಟನೆಗಳು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕೋರ್ಟ್ ಆದೇಶಕ್ಕೆ ಎಲ್ಲರೂ ಕಾಯಬೇಕು ಎಂದರು.