ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನವದೆಹಲಿ ಪ್ರವಾಸ ಮುಂದೂಡಿಕೆಯಾಗಿದೆ. ನಾಳೆ ದೆಹಲಿಗೆ ತೆರಳಲು ಸಿದ್ದರಾಗಿದ್ದ ಸಿಎಂ ಇದೀಗ ಪ್ರವಾಸದಲ್ಲಿ ಬದಲಾವಣೆ ಮಾಡಿದ್ದು, ಸೋಮವಾರ ರಾಷ್ಟ್ರ ರಾಜಧಾನಿಗೆ ತೆರಳುವುದಾಗಿ ತಿಳಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ಗೂ ಮೊದಲು ದೆಹಲಿಯಲ್ಲಿ ಸಂಸತ್ ಸದಸ್ಯರ ಸಭೆ ಆಗಬೇಕು. ಹಾಗಾಗಿ ನಾನು ನಾಳೆ ದೆಹಲಿಗೆ ಹೋಗಲು ಯೋಚಿಸಿದ್ದೆ. ಅದಕ್ಕಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದೆ. ಆದರೆ, ನಮ್ಮ ಸಂಸತ್ ಸದಸ್ಯರ ಮನವಿ ಮೇರೆಗೆ ಸೋಮವಾರ ದೆಹಲಿಗೆ ಹೋಗಲು ನಿರ್ಧರಿಸಿದ್ದೇನೆ ಎಂದರು.
ನಾಳೆ ದೆಹಲಿಗೆ ತೆರಳುವುದಾಗಿ ಇಂದು ಬೆಳಗ್ಗೆಯಷ್ಟೇ ತಿಳಿಸಿದ್ದ ಸಿಎಂ ಬೊಮ್ಮಾಯಿ, ವರಿಷ್ಠರ ಭೇಟಿಗೆ ಸಮಯವನ್ನೂ ಕೇಳಿದ್ದರು. ಆದರೆ ಎರಡು ದಿನ ಸಮಯಾವಕಾಶ ಕಷ್ಟ ಎನ್ನುವ ಸಂದೇಶ ದೆಹಲಿ ನಾಯಕರಿಂದ ಬಂದ ಹಿನ್ನೆಲೆ ಪ್ರವಾಸವನ್ನು ಸಿಎಂ ಮುಂದೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಸೋಮವಾರ ವರಿಷ್ಠರು ಲಭ್ಯವಾಗಲಿದ್ದು, ಆಗ ಸಂಪುಟ ವಿಸ್ತರಣೆ ಕುರಿತು ಸಿಎಂ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ದೆಹಲಿಗೆ ಹೋಗ್ತಿದ್ದೇನೆ. ವರಿಷ್ಠರ ಭೇಟಿಗೆ ಅವಕಾಶ ಕೇಳಿದ್ದೇನೆ. ಅವರ ಭೇಟಿಗೆ ಸಿಗುವ ಅವಕಾಶಕ್ಕೆ ಅನುಗುಣವಾಗಿ ದೆಹಲಿ ಭೇಟಿ ಪ್ರವಾಸದ ವೇಳಾಪಟ್ಟಿ ನಿಗದಿಯಾಗಲಿದೆ. ಇದೇ ವೇಳೆ, ಸಂಸದರ ಜೊತೆ ಸಂಸತ್ನಲ್ಲಿ ಗಮನ ಸೆಳೆಯುವ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಅಂತಾರಾಜ್ಯ ಜಲ ವಿವಾದಗಳ ಸಂಬಂಧ ರಾಜ್ಯದ ವಕೀಲರ ಜೊತೆ ಚರ್ಚೆ ಮಾಡುತ್ತೇನೆ ಎಂದಿದ್ದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಬಹಿರಂಗವಾಗಿ ಚರ್ಚೆ ಮಾಡಲು ಹೋಗಲ್ಲ ಎಂದ ಸಿಎಂ, ಸಂಪುಟ ವಿಸ್ತರಣೆ, ಪುನಾರಚನೆ ಎಲ್ಲವನ್ನೂ ವರಿಷ್ಠರತ್ತ ಬೆರಳು ತೋರಿ, ಹಾರಿಕೆಯ ಉತ್ತರ ನೀಡಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ