ಕರ್ನಾಟಕ

karnataka

ETV Bharat / city

ಬದಲಾವಣೆ ಕಾಲ ಆರಂಭವಾಗಿದೆ.. ಸಬೂಬು ಕಾಲ ಮುಗಿದು ಹೋಗಿದೆ : ಸಿಎಂ ಬೊಮ್ಮಾಯಿ - CM Basavaraj Bommai

ಇತ್ತೀಚಿನ ದಿನಗಳಲ್ಲಿ ಆಡಳಿತದ ವ್ಯಾಖ್ಯಾನ, ಪ್ರಜಾಪ್ರಭುತ್ವದ ಆಕಾಂಕ್ಷೆ ಬದಲಾವಣೆ ಆಗಿದೆ. ಸರ್ಕಾರದಿಂದ ಬದಲಾವಣೆ ಆಗುವ ಈ ಪರ್ವ ಕಾಲದಲ್ಲಿ ನಾವೂ ಬದಲಾಗಬೇಕು. ಆಗ ನಾವೂ ಪ್ರಸ್ತುತವಾಗಿ ಉಳಿಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು..

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : May 2, 2022, 2:18 PM IST

ಬೆಂಗಳೂರು :ಬದಲಾವಣೆಯ ಕಾಲ ಪ್ರಾರಂಭವಾಗಿದೆ. ಸಬೂಬು ಕಾಲ‌ ಮುಗಿದು ಹೋಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣ ಮಿತ್ರ ಏಕೀಕೃತ ಎಸ್​​ಸಿ-ಎಸ್​​ಟಿ 24x7 ಸಹಾಯವಾಣಿ (9482300400)ಯನ್ನು ಲೋಕಾರ್ಪಣೆ ಮಾಡಿದರು.

ಎಸ್‌ಸಿ-ಎಸ್‌ಟಿ 24x7 ಸಹಾಯವಾಣಿ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ಬಳಿಕ ಮಾತನಾಡಿದ ಸಿಎಂ, ಇತ್ತೀಚಿನ ದಿನಗಳಲ್ಲಿ ಆಡಳಿತದ ವ್ಯಾಖ್ಯಾನ, ಪ್ರಜಾಪ್ರಭುತ್ವದ ಆಕಾಂಕ್ಷೆ ಬದಲಾವಣೆ ಆಗಿದೆ. ಸರ್ಕಾರದಿಂದ ಬದಲಾವಣೆ ಆಗುವ ಈ ಪರ್ವ ಕಾಲದಲ್ಲಿ ನಾವೂ ಬದಲಾಬೇಕು. ಆಗ ನಾವೂ ಪ್ರಸ್ತುತವಾಗಿ ಉಳಿಯುತ್ತೇವೆ. ಅನುದಾನದ ಸದುಪಯೋಗವಾಗಬೇಕು. ಬದ್ಧತೆ ಇರಬೇಕು. ಆಗ ಸಮಾಜ‌ ಉದ್ಧಾರ ಆಗುತ್ತದೆ. ನಿಮ್ಮ ಕರ್ತವ್ಯ, ಸರ್ಕಾರದ ಧ್ಯೇಯೋದ್ದೇಶ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೊರೆಸುವ ಕೆಲಸ‌ ಮಾಡಬೇಕು. ಟೀಕೆ ಬರುತ್ತದೆ. ಅದಕ್ಕೆ ತಲೆ‌ಕೆಡಿಸಿಕೊಳ್ಳಬೇಡಿ ಎಂದರು.

ವರ್ತಮಾನ ಕಾಲದ ಸಾಧನೆ ಭವಿಷ್ಯದ ಗುರಿ ಮುಟ್ಟಿಸುತ್ತದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಫಲಾನುಭವಿ ಆಯ್ಕೆಯಾದ ಮೇಲೆ ಯಾರಿಗೆ ಗುತ್ತಿಗೆ ಕೊಡಬೇಕು ಎಂಬ ಸ್ಪಷ್ಟತೆ ಇರಬೇಕು. ಸರಳವಾಗಿ ದಾಖಲೆ ಕೊಡುವ ಕೆಲಸ ಆಗಬೇಕು. ಸರಳವಾಗಿ ಕಾರ್ಯಕ್ರಮ‌ ರೂಪಿಸಿ ಅದನ್ನು ಜನರಿಗೆ ಮುಟ್ಟಿಸಬೇಕು. ನ್ಯಾಯ ಕೊಡುವುದು ಅಷ್ಟೇ ಅಲ್ಲ, ಅವರಿಗೆ ಅವಕಾಶ ನೀಡುವ ಕಾಲ ಬಂದಿದೆ.

ವಿಳಂಬ ಧೋರಣೆ, ಅಸಡ್ಡೆ ಎಂದಿಗೂ ಸಹಿಸಲು ಸಾಧ್ಯವಿಲ್ಲ. ಸ್ವಾಭಿಮಾನದಿಂದ ಕಟ್ಟಕಡೆಯ ಮನುಷ್ಯನಿಗೆ ಸೇವೆ ಸಿಗಬೇಕು. ಇದರಲ್ಲಿ ಯಾವುದೇ ಮುಲಾಜಿಲ್ಲ. ರಾಜಿ ಇಲ್ಲ. ಕಾನೂನು ಬಲ‌ ಕೊಟ್ಟಿದ್ದೇವೆ.‌ ನಿಮಗೆ ಕೊಟ್ಡಿರುವ ಅಧಿಕಾರವನ್ನು ಆ ಜನರ ಅಭಿವೃದ್ಧಿ ಪರವಾಗಿ ಬಳಕೆ ಮಾಡಬೇಕು ಎಂದರು.

ಜವಾಬ್ದಾರಿಯಿಂದ ನುಣುಚುವ ನಾಯಕತ್ವದಿಂದ ಕೆಲಸ ಆಗುವುದಿಲ್ಲ. ನಾವು ಸ್ಪಷ್ಟತೆಯಿಂದ ನಿರ್ದೇಶನ ನೀಡುತ್ತೇವೆ. ಅದಕ್ಕೆ ಅನುಸಾರ ಕೆಲಸ ಮಾಡಿ. ಐದು ನಿಮಿಷ ಆ ಬಡ ಮನುಷ್ಯನಿಗೆ ಹೆಚ್ಚುವರಿ ಆಗಿ ಕೊಡಿ. ಬಡವರ ಉದ್ಧಾರ ಆಗಬೇಕು ಎಂದರೆ ಆತನ ಕೆಲಸವಾಗಬೇಕು. ಕೆಲಸ ಮಾಡುವುದಿಲ್ಲ ಅಂದರೆ ನೂರು ಕಾರಣಗಳು ಹುಟ್ಟಿಕೊಳ್ಳುತ್ತವೆ. ಕಡತ ವಿಲೇವಾರಿಗೆ ಹಲವು ಹಂತಗಳು ಇವೆ. ಅವುಗಳನ್ನು ತೆಗೆಯುತ್ತಿದ್ದೇವೆ.

ಐಎಎಸ್ ಅಧಿಕಾರಿಗಳು ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ನೀಡಬೇಕು. ಆಗುತ್ತದೆ ಎಂದರೆ ಆಗುತ್ತದೆ ಎಂದು ತಿಳಿಸಿ, ಇಲ್ಲ ಅಂದರೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿ. ಸಮಾಜ ಕಲ್ಯಾಣ ಇಲಾಖೆಗೆ ವೇಗ ಕೊಡಬೇಕು. ಒಂದು ಹೊಸ ಆಯಾಮವನ್ನು ನೀವು ಕೊಡಬೇಕು ಎಂದು ಸೂಚಿಸಿದರು. ಎಸ್​​ಸಿ, ಎಸ್​​ಟಿ, ಒಬಿಸಿ ಅಭಿವೃದ್ಧಿಗಾಗಿ ದುಡ್ಡು ಕೊಡುವುದು ಎಂದರೆ ಅದು ವೆಚ್ಚ ಅಲ್ಲ. ಅದು ಹೂಡಿಕೆಯಾಗಿದೆ. ಆರ್ಥಿಕತೆ ಎಂದರೆ ಹಣ ಅಲ್ಲ, ಬದಲಾಗಿ ಜನರ ದುಡಿಮೆ.

ಜನರು ಎಷ್ಟು ಹೆಚ್ಚು ದುಡಿಮೆ ಮಾಡುತ್ತಾರೆ ಅಷ್ಟು ಆರ್ಥಿಕತೆ ಹೆಚ್ಚಾಗುತ್ತದೆ. ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ವರ್ಗದವರನ್ನು ಕಟ್ಟಿ ಹಾಕುವ ಕೆಲಸ ಇನ್ನು ನಡೆಯುವುದಿಲ್ಲ. ಬದಲಾವಣೆಯ ಹರಿಕಾರರು ನೀವು ಆಗಬೇಕು. ಬದಲಾವಣೆಯ ವಾಹಿನಿ ಆಗಬೇಕು. ಬದಲಾವಣೆ ಆದರೆ ಅದರ ಪುಣ್ಯ ನಿಮಗೆ, ನಿಮ್ಮ ಮಕ್ಕಳಿಗೆ ಸಿಗುತ್ತದೆ. ನಿಮ್ಮ ಜೊತೆ, ಹೆಗಲಿಗೆ ಹೆಗಲು ಕೊಟ್ಟು ನಾವು ಇರುತ್ತೇವೆ ಎಂದು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಅಭಯ ನೀಡಿದರು.

ಇದನ್ನೂ ಓದಿ:'ಕನ್ನಡದ ಪ್ರದೇಶಗಳು ಮಹಾರಾಷ್ಟ್ರದಲ್ಲೂ ಇವೆ...' ಅಜಿತ್‌ ಪವಾರ್‌ಗೆ ತಕ್ಕ ತಿರುಗೇಟು ನೀಡಿದ ಬೊಮ್ಮಾಯಿ!

ABOUT THE AUTHOR

...view details