ಕರ್ನಾಟಕ

karnataka

ETV Bharat / city

ಕೋವಿಡ್ ಸಂಕಷ್ಟದ ಮಧ್ಯೆ ರಾಜ್ಯದಲ್ಲಿ ರಾಜಧರ್ಮ ಪಾಲನೆ: ಸಿಎಂ ಯಡಿಯೂರಪ್ಪ

ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಧ್ಯೇಯದೊಂದಿಗೆ ಕಲ್ಯಾಣ ರಾಜ್ಯವನ್ನು ಕಟ್ಟುವುದು ನಮ್ಮ ಗುರಿಯಾಗಿದೆ. ದಾಖಲೆ ಮಳೆ ಮತ್ತು ಪ್ರವಾಹದ ಜೊತೆಗೆ ಬರ ಹಾಗೂ ಸಾಂಕ್ರಾಮಿಕ ಪಿಡುಗು ಕೋವಿಡ್-19 ಸೇರಿ ಹಲವು ಸವಾಲು ಎದುರಿಸುತ್ತಿದ್ದೇವೆ. ಆರ್ಥಿಕ ಹಿಂಜರಿಕೆ, ಉದ್ಯೋಗ ಕಡಿತ ಹಾಗೂ ಬೊಕ್ಕಸಕ್ಕೆ ನಷ್ಟ, ಸ್ತಬ್ಧವಾದ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳಿಂದಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ಸ್ಥಾಪಿಸಲು, ಸಂಕಷ್ಟಕ್ಕೆ ಈಡಾದ ಜನರಲ್ಲಿ ಭರವಸೆ ಮೂಡಿಸಲು ನಮ್ಮ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಸಿಎಂ ಬಿಎಸ್​ವೈ ತಿಳಿಸಿದ್ದಾರೆ.

CM B S Yediyurappa
ಯಡಿಯೂರಪ್ಪ

By

Published : Aug 15, 2020, 11:01 AM IST

ಬೆಂಗಳೂರು: ಕೋವಿಡ್-19 ಎಂಬ ಮಹಾ ಪಿಡುಗಿನ ವಿರುದ್ಧದ ಹೋರಾಟದ ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿ ರಾಜಧರ್ಮ ಪಾಲನೆಗೆ ನಾವು ಮುಂದಾಗಿದ್ದೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಎಸ್​ಬೈ ಧ್ವಜಾರೋಹಣ ನೆರವೇರಿಸಿದರು. ಬಳಿಕ ತಮ್ಮ ಸಂದೇಶ ಭಾಷಣದಲ್ಲಿ ಮಾತನಾಡುತ್ತಾ, ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಧ್ಯೇಯದೊಂದಿಗೆ ಕಲ್ಯಾಣ ರಾಜ್ಯವನ್ನು ಕಟ್ಟುವುದು ನಮ್ಮ ಗುರಿಯಾಗಿದೆ. ದಾಖಲೆ ಮಳೆ ಮತ್ತು ಪ್ರವಾಹದ ಜೊತೆಗೆ ಬರ ಹಾಗೂ ಸಾಂಕ್ರಾಮಿಕ ಪಿಡುಗು ಕೋವಿಡ್-19 ಸೇರಿ ಹಲವು ಸವಾಲು ಎದುರಿಸುತ್ತಿದ್ದೇವೆ. ಆರ್ಥಿಕ ಹಿಂಜರಿಕೆ, ಉದ್ಯೋಗ ಕಡಿತ ಹಾಗೂ ಬೊಕ್ಕಸಕ್ಕೆ ನಷ್ಟ, ಸ್ತಬ್ಧವಾದ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳಿಂದಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ಸ್ಥಾಪಿಸಲು, ಸಂಕಷ್ಟಕ್ಕೆ ಈಡಾದ ಜನರಲ್ಲಿ ಭರವಸೆ ಮೂಡಿಸಲು ನಮ್ಮ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಕೋವಿಡ್ ನಿಯಂತ್ರಣಕ್ಕೆ ಅವಿರತ ಪ್ರಯತ್ನ:

ಕೋವಿಡ್-19 ನಿರ್ವಹಣೆಗೆ ನಮ್ಮ ಸರ್ಕಾರ ಸಮರೋಪಾದಿಯಲ್ಲಿ ಶ್ರಮಿಸುತ್ತಿದೆ ಎಂದರು.

ಸಚಿವರ ಕಾರ್ಯಪಡೆ, ಪರಿಣಿತ ವೈದ್ಯರ ಕಾರ್ಯಪಡೆ ಮತ್ತು ಅಧಿಕಾರಿಗಳ ಕಾರ್ಯಪಡೆಗಳನ್ನು ರಚಿಸಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಆಸ್ಪತ್ರೆಗಳು, ಫೀವರ್ ಕ್ಲಿನಿಕ್‌ಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಸೋಂಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ವಿವರಿಸಿದರು.

ಸಿಎಂ ಯಡಿಯೂರಪ್ಪ

ಆರಂಭಿಕ ಹಂತದಲ್ಲಿ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ಅನಿವಾರ್ಯವಾಗಿ ಲಾಕ್​ಡೌನ್ ಘೋಷಿಸಲಾಯಿತು. ಲಾಕ್‌ಡೌನ್‌ನಿಂದಾಗಿ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಕ್ಷೀಣಗೊಂಡವು. ಆದರೆ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿಹಾರವಲ್ಲ ಎಂಬ ಜಾಗತಿಕ ಉದಾಹರಣೆಗಳನ್ನು ಮನಗಂಡು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ವಾಣಿಜ್ಯ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗಿದೆ ಎಂದರು.

ಲಾಕ್​ಡೌನ್​​ನಿಂದ ಸಂಕಷ್ಟಕ್ಕೊಳಗಾದ ರೈತರು, ನೇಕಾರರು ಮತ್ತು ಮೀನುಗಾರರು, ನಿರ್ಮಾಣ ವಲಯದ ಕಾರ್ಮಿಕರು, ಕ್ಷೌರಿಕರು ಮತ್ತು ಅಗಸರು, ಟ್ಯಾಕ್ಸಿ ಚಾಲಕರು ಮತ್ತು ಆಟೋ ಚಾಲಕರು ಸೇರಿ ಅಸಂಘಟಿತ ವಲಯದ ದುರ್ಬಲರ ನೆರವಿಗಾಗಿ ಒಟ್ಟು 3,187 ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಲಾಗಿದೆ ಎಂದರು.

ನೇಗಿಲ ಯೋಗಿಯ ರಕ್ಷಣೆ ನಮ್ಮ ಮೊದಲ ಆದ್ಯತೆ:

ನೇಗಿಲ ಯೋಗಿ ಅನ್ನದಾತನ ರಕ್ಷಣೆ ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂದರು.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6,000 ರೂ. ನಗದು ನೆರವಿನ ಜೊತೆಗೆ ನಮ್ಮ ಸರ್ಕಾರ ಹೆಚ್ಚುವರಿಯಾಗಿ 4,000 ರೂ. ಆರ್ಥಿಕ ನೆರವಿನ 2,000 ರೂ.ಗಳ ಮೊದಲ ಕಂತನ್ನು ಈಗಾಗಲೇ ಬಿಡುಗಡೆ ಮಾಡಿದೆ. 1,000 ಕೋಟಿ ರೂ. ಮೊತ್ತವನ್ನು ಸುಮಾರು 50 ಲಕ್ಷ ರೈತರ ಖಾತೆಗಳಿಗೆ ಮೊದಲ ಕಂತಿನಲ್ಲಿ ಜಮಾ ಮಾಡಲಾಗುತ್ತಿದೆ ಎಂದರು.

2020-21ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಅರ್ಹ ರೈತರಿಗೆ ಸಾಲ ದೊರೆಯಬೇಕೆಂಬ ನಿಟ್ಟಿನಲ್ಲಿ 14.50 ಸಾವಿರ ಕೋಟಿ ರೂಪಾಯಿ ಬೆಳೆ ಸಾಲವನ್ನು ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರು ಉತ್ಪಾದಿಸಿದ 3,175 ಕೋಟಿ ರೂ. ಮೌಲ್ಯದ ಹೆಸರುಕಾಳು, ತೊಗರಿ, ಶೇಂಗಾ, ಕಡಲೆಕಾಳು, ಕೊಬ್ಬರಿ ಇತ್ಯಾದಿ ಉತ್ಪನ್ನಗಳನ್ನು ಸುಮಾರು 5.82 ಲಕ್ಷ ರೈತರಿಂದ ಖರೀದಿಸಲಾಗಿದೆ ಎಂದು ವಿವರಿಸಿದರು.

ಮಳೆಪೀಡಿತ ಜನರ ಸಂಕಷ್ಟಕ್ಕೆ ಸ್ಪಂದನೆ:

ರಾಜ್ಯದಲ್ಲಿ ಮಳೆ ಹೆಚ್ಚಾಗಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರವಾಹ ಪೀಡಿತ ಕುಟುಂಬಗಳಿಗೆ ತುರ್ತಾಗಿ ಸ್ಪಂದಿಸಲು ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಪರಿಹಾರವಾಗಿ 10,000 ರೂ., ಪೂರ್ಣ ಮನೆ ಹಾನಿಯಾಗಿದ್ದರೆ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ಗಳನ್ನು ವಿತರಿಸಲು ಆದೇಶಿಸಲಾಗಿದೆ. ವಿಪತ್ತು ಪರಿಹಾರ ನಿಧಿಯಡಿ ನೆರೆ ಸಂತ್ರಸ್ತರಿಗೆ ಸೂಕ್ತ ಹಾಗೂ ತುರ್ತು ಪರಿಹಾರವನ್ನು ನೀಡಲು ಸೂಚಿಸಲಾಗಿದೆ. ಕೊಡಗು, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕ ಸೇರಿದಂತೆ ಸುಮಾರು 11 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಒಟ್ಟು 984 ಕೋಟಿ ರೂ. ಅನುದಾನ ಲಭ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿ ಪರಿಸ್ಥಿತಿಯ ಅವಲೋಕನ ಹಾಗೂ ನಿರ್ವಹಣೆಯಲ್ಲಿ ನಿರತರಾಗಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಇತರ ಇಲಾಖಾ ಅಧಿಕಾರಿಗಳು ಮಳೆ ಮತ್ತು ಪ್ರವಾಹ ಸಂಕಷ್ಟಕ್ಕೊಳಗಾಗಿರುವ ಜನರ ರಕ್ಷಣೆಗೆ ಶ್ರಮಿಸುತ್ತಿದ್ದಾರೆ ಎಂದರು.

ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಒತ್ತು:

ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ, ತ್ಯಾಜ್ಯ ವಿಲೇವಾರಿ, ರಸ್ತೆಗಳನ್ನು ನಿರ್ಮಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಈ ವರ್ಷ ಏಪ್ರಿಲ್ 1ರಿಂದ ಈವರೆಗೆ 7.06 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿ, 1856 ಕೋಟಿ ರೂ. ವೇತನವನ್ನು ಪಾವತಿಸಲಾಗಿದೆ. ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 3.73 ಲಕ್ಷ ಕುಟುಂಬಗಳಿಗೆ ಹೊಸ ಜಾಬ್ ಕಾರ್ಡ್ ನೀಡಲಾಗಿದೆ ಎಂದರು.

ಧ್ವಜಾರೋಹಣ ನೆರವೇರಿಸಿದ ಸಿಎಂ

ಕಾಲ ಕಾಲಕ್ಕೆ ಸಭೆಗಳನ್ನು ನಡೆಸಿ ಸುವ್ಯವಸ್ಥೆಗಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಪರಾಧ ನಿಯಂತ್ರಣ, ಸೈಬರ್ ಕ್ರೈಂ ಅಪರಾಧಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದರು.

ಬೆಂಗಳೂರು ಅಭಿವೃದ್ಧಿಗೂ ಆದ್ಯತೆ:

ಬೆಂಗಳೂರಿನಲ್ಲಿ ರಾಜಕಾಲುವೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಮೊದಲನೇ ಹಂತದಲ್ಲಿ ಧರ್ಮಾಂಬುಧಿ ಕೆರೆಯಿಂದ ಬೆಳ್ಳಂದೂರು ಕೆರೆವರೆಗೆ ಪಾರಂಪರಿಕ ರಾಜಕಾಲುವೆ ಹಸಿರೀಕರಣ ಮಾಡಿ 36 ಕಿ.ಮೀ. ಉದ್ದದ ಕಾಲ್ನಡಿಗೆ ಹಾಗೂ ಬೈಸಿಕಲ್ ಪಥ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜಧಾನಿಯ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಬೆಂಗಳೂರು ಸಬ್-ಅರ್ಬನ್ ರೈಲ್ವೆ ಯೋಜನೆ, ಮೆಟ್ರೋ ಯೋಜನೆಗೆ ಚುರುಕು ನೀಡಲಾಗಿದೆ ಎಂದರು.

ಅಯೋಧ್ಯೆಯಲ್ಲಿ ಯಾತ್ರಿ ನಿವಾಸ:

ಶತಮಾನಗಳ ನಂತರ ಕಾನೂನಾತ್ಮಕವಾಗಿ ಮತ್ತು ಸೌಹಾರ್ದಯುತವಾಗಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಇದು ಚಾರಿತ್ರಿಕ ದಿನವಾಗಿದೆ ಎಂದರು. ಅಯೋಧ್ಯೆಯಲ್ಲಿ ರಾಜ್ಯದ ಯಾತ್ರಿಕರಿಗಾಗಿ ಕರ್ನಾಟಕ ಯಾತ್ರಿ ನಿವಾಸವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details