ಬೆಂಗಳೂರು: ವರ್ಷದ ಕೊನೆಯಲ್ಲಿ ಬರುವ ಹಬ್ಬ ಕ್ರಿಸ್ಮಸ್. ಈ ಹಬ್ಬದ ಸಂಭ್ರಮದ ತಯಾರಿಗೆ ನೈಟ್ ಕರ್ಫ್ಯೂ ನಿರ್ಧಾರ ಗ್ರಹಣ ತಂದಿತ್ತು. ಇದೀಗ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಆದೇಶ ಹಿಂಪಡೆದಿದ್ದರಿಂದ ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡಿದೆ.
ಕ್ರಿಸ್ಮಸ್ ಹಬ್ಬಕ್ಕೆ ಕೇಕ್ ತಯಾರಿಸಲಾಗಿದೆ.. ಕ್ರಿಸ್ಮಸ್ ಹಬ್ಬಕ್ಕೆ ಕೇಕ್ಗಳನ್ನು ವಿಶೇಷವಾಗಿ ಖರೀದಿಸಲಾಗುತ್ತದೆ. ಸಿಲಿಕಾನ್ ಸಿಟಿಯಲ್ಲಿ ವಿವಿಧ ಬಣ್ಣ, ವಿನ್ಯಾಸದ ಕೇಕ್ ಹಾಗೂ ಚಾಕೊಲೇಟ್ ಮಾರಾಟವಾಗುತ್ತದೆ. ಸಾಂತಾ ಕಪ್ ಕೇಕ್, ರೆಡ್ ಚೋಕೊ ಡುಯೆಟ್, ಬೆಲ್ಜಿಯನ್ ಟ್ರಫಲ್, ಗ್ರೀನಿಶ್ ಕ್ರಿಸ್ಮಸ್ ಟ್ರೀ, ಫ್ರೂಟ್ ಪ್ಲಮ್ ಕೇಕ್, ಕೇಕ್ ವಿಥ್ ಚೋಕೊ ಯುಲ್ಲೇ ಲಾಗ್ ಹೀಗೆ ವಿವಿಧ ಬಣ್ಣ, ವಿನ್ಯಾಸದ ಕೇಕ್ ನೋಡುತ್ತಿದ್ದರೆ ಬಾಯಲ್ಲಿ ನೀರೂರುತ್ತದೆ.
ಬೆಂಗಳೂರಿನ ಅಬ್ರೀ ಕೇಕ್ ಚಾಕೊಲೇಟ್ ಅಂಗಡಿಯಲ್ಲಿ ಕ್ರಿಸ್ಮಸ್ ಹಿನ್ನೆಲೆ ವಿಶೇಷ ಕೇಕ್ ಅಂಡ್ ಚಾಕೊಲೇಟ್ ರೆಡಿ ಮಾಡಿದ್ದಾರೆ. ಗ್ರಾಹಕರ ಆರೋಗ್ಯ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ಚಾಕೊಲೇಟ್ ಕೇಕ್ ಇಲ್ಲಿ ಸಿಗುತ್ತದೆ. ಮಕ್ಕಳಿಂದ ಹಿಡಿದು ವಯೋವೃದ್ಧರಿಗೂ ಇಷ್ಟವಾಗುವ ಬಣ್ಣ ಬಣ್ಣದ ಕೇಕ್ಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ಕೊರೊನಾ ನಡುವೆಯೂ ಈ ಬಾರಿಯ ಕ್ರಿಸ್ಮಸ್ ಹಬ್ಬಕ್ಕೆ ಮೆರುಗು ತಂದು ಕೊಡುತ್ತಿರುವುದು ಇಲ್ಲಿ ಸಿದ್ಧವಾಗಿರೋ ಸ್ಪೆಷಲ್ ಚಾಕೊಲೇಟ್ ಹಾಗೂ ಕೇಕ್ಗಳು ಎಂದು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅಂಗಡಿ ಮಾಲೀಕ ಕಾರ್ತೀಕ್, 8 ವರ್ಷದಿಂದ ನಾವು ವಿಶಿಷ್ಟ ರೀತಿಯ ಕೇಕ್, ಚಾಕೊಲೇಟ್ ತಯಾರಿಸಿ ಜನರಿಗೆ ನೀಡುತ್ತಿದ್ದೇವೆ.
ನಮ್ಮಲ್ಲಿ ಎಗ್ ಲೆಸ್ ಕೇಕ್ಗಳನ್ನು ತಯಾರಿಸುತ್ತಿದ್ದು, ತುಂಬಾ ಕಡಿಮೆ ದರದಲ್ಲಿ ಗ್ರಾಹಕರಿಗೆ ಕೊಡುತ್ತಿದ್ದೇವೆ. ದೀಪಾವಳಿ ಹಬ್ಬಕ್ಕೆ ಕೂಡ ನಾವು ಪಟಾಕಿಯ ರೂಪದಲ್ಲಿ ಚಾಕೊಲೇಟ್ ಮಾಡಿದ್ದೆವು. ಈಗ ಕ್ರಿಸ್ಮಸ್ ಹಬ್ಬಕ್ಕೆ ವಿಶೇಷವಾಗಿ ಕೇಕ್, ಚಾಕೊಲೇಟ್ ತಯಾರಿಸಿದ್ದೇವೆ. ಚಿಕ್ಕ ಚಿಕ್ಕ ಚಾಕೊಲೇಟ್ಗಳನ್ನು ಕ್ರಿಸ್ಮಸ್ ಹಬ್ಬಕ್ಕಾಗಿ ವಿಶೇಷವಾಗಿ ತಯಾರಿಸಿದ್ದೇವೆ. ಕಾರ್, ಪೆಂಗ್ವಿನ್, ಗಾಲ್ಫ್ ಬಾಲ್ ವಿನ್ಯಾಸದಲ್ಲಿ ಕೇಕ್ ತಯಾರಿಸಿದ್ದೇವೆ ಎಂದು ಹೇಳಿದರು.
ಮಲ್ಲೇಶ್ವರದ ನಿವಾಸಿ ಸೌಮ್ಯ ಮಾತನಾಡಿ, ಕ್ರಿಸ್ಮಸ್ ಹಬ್ಬಕ್ಕೆ ಕೇಕ್ ಹಾಗೂ ಚಾಕೊಲೇಟ್ ಖರೀದಿಗೆ ಬಂದಿದ್ದು, ನೈಟ್ ಕರ್ಫ್ಯೂ ಇಲ್ಲದಿರುವುದಕ್ಕೆ ಸಂಭ್ರಮಾಚರಣೆ ಜೋರಾಗಿ ನೆಡೆಯುತ್ತಿದೆ. ಈ ವರ್ಷ ದೀಪಾವಳಿ, ವರ ಮಹಾಲಕ್ಷ್ಮಿ, ಗೌರಿ ಗಣೇಶ ಹಬ್ಬಗಳು ಭಯ, ಗೊಂದಲದಲ್ಲೇ ಆಚರಿಸಿದ್ದೇವೆ. ಕೋವಿಡ್ ಹಿನ್ನೆಲೆ ಎಲ್ಲಾ ಹಬ್ಬಗಳನ್ನು ಸರಳವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ.
ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಘೋಷಿಸಿದಾಗ ಬೇಸರವಾಗಿತ್ತು. ಕರ್ಫ್ಯೂ ಹಿಂಪಡೆದಿದ್ದರಿಂದ ಸರಳವಾಗಿ ಹಬ್ಬ ಆಚರಿಸುತ್ತೇವೆ. ನಾವು ನಾಗರಿಕರಾಗಿ ಜವಾಬ್ದಾರಿಯಿಂದ ನೆಡೆದುಕೊಳ್ಳಬೇಕು, ಮುಂದಿನ ವರ್ಷ ವಿಜೃಂಭಣೆಯಿಂದ ಹಬ್ಬಗಳನ್ನು ಆಚರಿಸಬಹುದು ಎಂದು ಹೇಳಿದರು. ಸರ್ಕಾರ ನೈಟ್ ಕರ್ಫ್ಯೂ ಹಿಂತೆಗೆದಿರುವುದರಿಂದ ಜನಸಾಮಾನ್ಯರು, ವ್ಯಾಪಾರಸ್ಥರ ಮೊಗದಲ್ಲಿ ನಗು ಮೂಡಿದ್ದು, ಗ್ರಾಹಕರು ಹಬ್ಬದ ಖರೀದಿಯಲ್ಲಿ ನಿರತರಾಗಿದ್ದಾರೆ.