ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ಪಡೆದ ಕೂಡಲೇ ಸಚಿವ ಸಂಪುಟದಲ್ಲಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಸರ್ವ ಪ್ರಯತ್ನಗಳನ್ನು ಮಾಡುವುದಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದ್ದಾರೆ ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನವದೆಹಲಿಯಲ್ಲಿ ನಿನ್ನೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಇಂಧನ ಸಚಿವರನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರೊಂದಿಗೆ ನಾಲ್ಕೈದು ಯೋಜನೆಗಳ ಬಗ್ಗೆ ವಿವರವಾಗಿ ಚರ್ಚೆಯಾಗಿದೆ. ಮಹದಾಯಿ, ಮೇಕೆದಾಟು, ಕೃಷ್ಣಾ ಮೇಲ್ದಂಡೆ ಹಾಗೂ ಭದ್ರಾ ಮೇಲ್ದಂಡೆ ಕುರಿತು ಚರ್ಚೆಯಾಗಿದೆ.
ಈ ಯೋಜನೆಗಳ ಬಗ್ಗೆ ರಾಜ್ಯದ ನಿಲುವು ಹಾಗೂ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್ ಅನುಮೋದಿಸುವುದು ಹಾಗೂ ಮಹದಾಯಿ ಯೋಜನೆಯ ಸಾಧ್ಯತಾ ವರದಿಗೆ ಒಪ್ಪಿಗೆ ನೀಡುವುದನ್ನು ಆದಷ್ಟು ಬೇಗನೆ ಮಾಡಲಾಗುವುದು ಎಂದರು.
ಮೇಕೆದಾಟು ಯೋಜನೆ:ಮೇಕೆದಾಟು ಯೋಜನೆಯಿಂದ ನಮಗೆ ನ್ಯಾಯ ಸಮ್ಮತವಾಗಿ ದೊರೆಯಬೇಕಾದ ನೀರು ದೊರೆಯುತ್ತದೆ. ಇದರಿಂದ ತಮಿಳುನಾಡಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಪ್ರತಿ ವರ್ಷ ತಮಿಳುನಾಡಿಗೆ ಅವರ ಪಾಲಿನ ನೀರಿಗಿಂತಲೂ ಹೆಚ್ಚುವರಿ ನೀರು ಹೋಗುತ್ತಿದೆ. ಅದು ಎಲ್ಲಿ ಕಡಿಮೆಯಾಗುತ್ತದೆ ಎನ್ನುವ ಆತಂಕ ಅವರದ್ದು. ನ್ಯಾಯಾಧೀಕರಣದ ತೀರ್ಮಾನದಂತೆ ಅವರ ಪಾಲನ್ನು ಒದಗಿಸಲಾಗುವುದು ಎಂದರು.
ಕೃಷ್ಣಾ ಮೇಲ್ದಂಡೆ: ಯು.ಕೆ.ಪಿ 3 ನೇ ಹಂತದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಫಿಡೆವಿಟ್ ಸಲ್ಲಿಸಬೇಕಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ನಮ್ಮ ವಕೀಲರು ಸಹ ನ್ಯಾಯಾಲಯದಲ್ಲಿ ವಾದ ಮಾಡಿದ್ದಾರೆ. ಜೊತೆಗೆ ನ್ಯಾಯಮೂರ್ತಿಗಳ ನೇಮಕಾತಿ ಆದಷ್ಟು ಶೀಘ್ರವಾಗಿ ಮಾಡಲು ಪ್ರಯತ್ನ ಗಳು ನಡೆದಿದೆ ಎಂದು ತಿಳಿಸಿದರು.
ಕಾನೂನು ಎಲ್ಲರಿಗೂ ಒಂದೆ: ಹಲಾಲ್ ಮತ್ತು ಹಿಜಾಬ್ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಎಲ್ಲರಿಗೂ ಒಂದೆ. ಎಲ್ಲರೂ ಅದಕ್ಕೆ ತಲೆಬಾಗಿ ನಡೆಯಲೇಬೇಕು. ನಮ್ಮ ಸರ್ಕಾರ, ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಕಾಪಾಡಲು ಪ್ರಾಮುಖ್ಯತೆ ನೀಡುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು ನಮ್ಮ ಸಮಾಜದಲ್ಲಿ ಯಾವ ರೀತಿ ಆಚರಿಸಬೇಕು ಎನ್ನುವುದು ಧಾರ್ಮಿಕ- ಸಾಮಾಜಿಕ ವಿಚಾರ ಎಂದರು.