ಬೆಂಗಳೂರು: ಪವಿತ್ರ ವಸ್ತ್ರ ಅಭಿಯಾನದಡಿ, ಚರಕ, ದೇಶಿ, ಖಾದಿ ಸೇರಿದಂತೆ ವಿವಿಧ ಸಂಘಟನೆಗಳು ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಕೈಮಗ್ಗ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಬುಧವಾರ ಉದ್ಘಾಟನೆಗೊಳಿಸಿದರು. ಜೊತೆಗೆ 22,570 ರೂ. ಮೌಲ್ಯದ ಸೀರೆ ಜೊತೆಗೆ ದುಪ್ಪಟ್ಟ, ಪುಸ್ತಕಗಳನ್ನು ಖರೀದಿಸಿದರು.
ಚರಕ ಮಳಿಗೆಯಿಂದ 2, ನಾಸಿಕ್-1, ಮಗ್ಗದ ಖಾದಿ-1, ಟಿಂಬಕ್ಟು ಬ್ರಾಂಡ್ನ 1 ಸೀರೆ ಖರೀದಿಸಿದರು. ಜೊತೆಗೆ 8 ಪುಸ್ತಕಗಳು ಹಾಗೂ 4 ದುಪ್ಪಟ್ಟಗಳನ್ನು ಖರೀದಿಸಿದರು.
ಸ್ವದೇಶಿ ವಸ್ತುಗಳ ಬಳಕೆ:
ಬಳಿಕ ಮಾತನಾಡಿದ ಅವರು, ಚಿತ್ರಕಲಾ ಪರಿಷತ್ತಿನಲ್ಲಿ ವಸ್ತ್ರದ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಖಾದಿಗಾಗಿ ಕೆಲಸ ಮಾಡುತ್ತಿರುವುದು ಪ್ರತಿಷ್ಠಿತ ಸಂಸ್ಥೆ ಚರಕ ಸಂಸ್ಥೆ. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ವೇಳೆ ಸ್ವದೇಶಿ ವಸ್ತುಗಳನ್ನು ಬಳಸಿ ಎಂದಿದ್ದರು. ಇದು ಇಂದಿಗೂ ಪ್ರಸ್ತುತ. ಇಂದೂ ಕೂಡಾ ಚೀನಾದ ವಸ್ತುಗಳನ್ನು ದೂರ ತಳ್ಳಬೇಕು ಎಂದು ಮಾತಾಡುತ್ತಿದ್ದೇವೆ. ಅದೇ ದಾರಿಯಲ್ಲಿ ಪ್ರಸನ್ನ ಅವರ ಪವಿತ್ರ ವಸ್ತ್ರ ಅಭಿಯಾನ ನಡೆಯುತ್ತಿದೆ. ಕೈಮಗ್ಗದ ಬಟ್ಟೆಗಳನ್ನು ಧರಿಸಿದರೆ ಆನಂದವಾಗುತ್ತದೆ. ಬೆಂಗಳೂರಿಗರು ಇಲ್ಲಿಗೆ ಭೇಟಿ ನೀಡಿ ಖರೀದಿಸಿ ಎಂದು ಕರೆ ನೀಡಿದರು.
ಕೈಮಗ್ಗದ ಸೀರೆಗಳು ನನಗೂ ಇಷ್ಟ:
ವೈಯಕ್ತಿಕವಾಗಿ ನನಗೂ ಕೈಮಗ್ಗದ ಸೀರೆಗಳು ಇಷ್ಟ. ಹೆಚ್ಚು ಖಾದಿ ಬಳಸಲು ಪ್ರಯತ್ನಿಸುತ್ತೇನೆ. ಇದೀಗ ನಾಲ್ಕೈದು ಸೀರೆಗಳನ್ನು ಖರೀದಿಸಿರುವುದಾಗಿ ಹೇಳಿದ್ರು.
ಚರಕ, ದೇಶಿ ಸಂಸ್ಥೆಯು ಕೋವಿಡ್ ಸಮಯದಲ್ಲಿ ಹೊರತಂದ ನೈಸರ್ಗಿಕ ಬಣ್ಣದ ಹೊಸ ಶೈಲಿಯ ವಸ್ತ್ರಗಳೊಂದಿಗೆ, ದೇಶದ ಇತರೆ ಭಾಗಗಳಿಂದ ಬಂದಂತಹ ಸುಪ್ರಸಿದ್ಧ ಖಾದಿ ಸಂಸ್ಥೆಗಳಾದ ತಮಿಳುನಾಡಿನ ತುಲಾ ಖಾದಿ, ಮಹಾರಾಷ್ಟ್ರದ ಮಘನ್ ಖಾದಿ, ಸುಮಧ ಖಾದಿ, ಆಂಧ್ರಪ್ರದೇಶದ ಟಿಂಬಕ್ಟು ಖಾದಿ, ಕಲಾ ಸೀಮ ಪದಾರ್ಥಗಳು, ಕೈಮಗ್ಗ ನೇಕಾರರ ಒಕ್ಕೂಟದ ಸಾಂಪ್ರದಾಯಿಕ ಸೀರೆ, ಬಟ್ಟೆ, ಇತರೆ ಉಡುಪುಗಳು, ಫಾರ್ಮ್ ವೇದ, ಇಕ್ರಾ ಸಂಸ್ಥೆಯ ಕೃಷಿ ಉತ್ಪನ್ನಗಳು, ಸಹನಾ, ಚೇತನಾ, ಅಗಸ್ತ್ಯ ಸಂಸ್ಥೆಯ ಕರಕುಶಲ ವಸ್ತುಗಳು ಹೀಗೆ ವಿವಿಧ ಕೈ ಉತ್ಪನ್ನಗಳ ಉತ್ಪಾದಕರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.