ಕರ್ನಾಟಕ

karnataka

ETV Bharat / city

ತಮಿಳುನಾಡಿಗೆ ನೀರು ಬಿಡುಗಡೆ: ಕಾವೇರಿ ಜಲಾಶಯಗಳ ಸ್ಥಿತಿಗತಿ, ರೈತರ ಅಸಲಿ ಆತಂಕ ಏನು?

ಜೂನ್ ಮತ್ತು ಜುಲೈ ತಿಂಗಳಲ್ಲಿ ಕಾವೇರಿ ನದಿಯಿಂದ ತಮಿಳುನಾಡಿಗೆ ಒಟ್ಟು 40.43 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Cauvery Water Management Authority Orders from Cauvery River to Tamil Nadu
ತಮಿಳುನಾಡಿಗೆ ನೀರು ಬಿಡುಗಡೆ: ಕಾವೇರಿ ಜಲಾಶಯಗಳ ಸ್ಥಿತಿಗತಿ, ರೈತರ ಅಸಲಿ ಆತಂಕ ಏನು?

By

Published : Jun 14, 2020, 5:46 PM IST

ಬೆಂಗಳೂರು: ತಮಿಳುನಾಡಿಗೆ 40.43 ಟಿಎಂಸಿ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ನೀಡಿದೆ. ಪ್ರಾಧಿಕಾರದ ಈ ಆದೇಶ ರಾಜ್ಯದ ರೈತರ ಕಣ್ಣು ಕೆಂಪಾಗಿಸಿದ್ದು, ಅಷ್ಟಕ್ಕೂ ಕಾವೇರಿ ಜಲಾಶಯಗಳಲ್ಲಿನ ವಾಸ್ತವ ಸ್ಥಿತಿಗತಿ ಏನು ಎಂಬ ವರದಿ ಇಲ್ಲಿದೆ.

ತಮಿಳುನಾಡಿಗೆ ನೀರು ಬಿಡುಗಡೆ: ಕಾವೇರಿ ಜಲಾಶಯಗಳ ಸ್ಥಿತಿಗತಿ, ರೈತರ ಅಸಲಿ ಆತಂಕ ಏನು?
ಮಾನ್ಸೂನ್ ಆರಂಭದಲ್ಲೇ ತಮಿಳುನಾಡು ಜೊತೆ ಕಾವೇರಿ ನೀರಿನ ತಿಕ್ಕಾಟ ಶುರುವಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ರಾಜ್ಯದ ರೈತರ‌ನ್ನು ಆಕ್ರೋಶಕ್ಕೊಳಪಡಿಸಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಕಾವೇರಿ ನದಿಯಿಂದ ತಮಿಳುನಾಡಿಗೆ ಒಟ್ಟು 40.43 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ಅದರಂತೆ ಜೂನ್​ನಲ್ಲಿ 9.19 ಟಿಎಂಸಿ, ಜುಲೈ ತಿಂಗಳಲ್ಲಿ 31.24 ಟಿಎಂಸಿ ನೀರು ಬಿಡುವಂತೆ ಆದೇಶ ನೀಡಿದೆ. ಪ್ರಾಧಿಕಾರದ ಆದೇಶದ ಪ್ರಕಾರ ಒಂದು ವಾರದಲ್ಲಿ ಒಟ್ಟು 40.43 ಟಿಎಂಸಿಯ ಶೇ.30ರಷ್ಟು ನೀರನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದೆ.

ಕಾವೇರಿ ಜಲಾಶಯದ ಸ್ಥಿತಿಗತಿ ಏನು?
ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಮುಖವಾಗಿ ಕೆಆರ್​ಎಸ್​, ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉತ್ತಮ ನೀರಿನ ಮಟ್ಟವಿದ್ದು, ನಂತರ ದಿನಗಳಲ್ಲಿ ಮಳೆಯನ್ನಾಧರಿಸಿ ನೀರಿನ ಪ್ರಮಾಣ ಏರಿಕೆಯಾಗಲಿದೆ. ಜೂನ್ 13 ರವರೆಗೆ ಕೆಆರ್​​ಎಸ್​ ಜಲಾಶಯದಲ್ಲಿ 13.17 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷದ ಜೂನ್​ ತಿಂಗಳು 6.53 ಟಿಎಂಸಿ ನೀರು ಶೇಖರಣೆಯಾಗಿತ್ತು. ಸದ್ಯ 1,282 ಕ್ಯುಸೆಕ್ ನೀರು ಒಳಹರಿವು ಇದೆ.

ಕಬಿನಿ ಜಲಾಶಯದಲ್ಲಿ 4.10 ಟಿಎಂಸಿ ನೀರು ಸಂಗ್ರಹವಿದೆ. ಕಳೆದ‌ ವರ್ಷ ಸುಮಾರು 2.10 ಟಿಎಂಸಿ ನೀರು ಸಂಗ್ರಹವಿತ್ತು. ಸದ್ಯದ ನೀರಿನ ಒಳಹರಿವು 864 ಕ್ಯುಸೆಕ್ ಇದೆ. ಇತ್ತ ಹೇಮಾವತಿ ಜಲಾಶಯದಲ್ಲಿ ಸದ್ಯ 8.32 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಬಾರಿ ಜೂನ್ 13ಕ್ಕೆ 3.43 ಟಿಎಂಸಿ ನೀರು ಸಂಗ್ರಹವಾಗಿತ್ತು. ಈಗ ಸುಮಾರು 896 ಕ್ಯುಸೆಕ್ ಒಳಹರಿವು ಇದೆ. ಇನ್ನು ಹಾರಂಗಿ ಜಲಾಶಯದಲ್ಲಿ ಸದ್ಯ 3.02 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ಬಾರಿ ಸುಮಾರು 1.08 ಟಿಎಂಸಿ ನೀರು ಇತ್ತು. ಸದ್ಯದ ಒಳಹರಿವು ಸುಮಾರು 237 ಕ್ಯುಸೆಕ್ ಇದೆ. ನಾಲ್ಕು ಜಲಾಶಯಗಳಲ್ಲಿ ಸದ್ಯಕ್ಕೆ ಒಟ್ಟು 28.61 ಟಿಎಂಸಿ ನೀರಿನ ಶೇಖರಣೆ ಇದೆ.

ಈ ಬಾರಿ ಸಹಜ ಮಾನ್ಸೂನ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಾವೇರಿ ನದಿಯ ಉಗಮಸ್ಥಾನವಾದ ಕೊಡಗಿನ ಭಾಗಮಂಡಲದಲ್ಲಿ ಜನವರಿ ಮತ್ತು ಮೇ ತಿಂಗಳ ಮಧ್ಯೆ ಸರಾಸರಿ 37 ಇಂಚು ಮಳೆಯಾಗಿದೆ. ಸಾಮಾನ್ಯವಾಗಿ 20-24 ಇಂಚು ಮಳೆಯಾಗುತ್ತದೆ. ಮೈಸೂರು ಮತ್ತು ಮಂಡ್ಯದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂಬ ಆಶಾಕಿರಣ ಹವಾಮಾನ ಇಲಾಖೆಯದ್ದು.

ರೈತರ ಆತಂಕ, ಆಕ್ರೋಶಕ್ಕೆ ಕಾರಣ ಏನು?

ಪ್ರಾಧಿಕಾರದ ಆದೇಶಕ್ಕೆ ರಾಜ್ಯದ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ನಾಲ್ಕು ಕಾವೇರಿ ಜಲಾಶಯಗಳಲ್ಲಿ ಸುಮಾರು 28.61 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ. ಹೀಗಿದ್ದಾಗ ಜೂನ್ ಮತ್ತು ಜುಲೈ ತಿಂಗಳಲ್ಲಿ ಒಟ್ಟು 40.43 ಟಿಎಂಸಿ ನೀರು ಬಿಡಲು ಆದೇಶಿಸಿರುವುದು ಅವೈಜ್ಞಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಲಸಂಪನ್ಮೂಲ ಅಧಿಕಾರಿಗಳು ರಾಜ್ಯದ ವಾಸ್ತವ ಸ್ಥಿತಿಗತಿ ಮುಂದಿಡದ ಕಾರಣ, ಈ ಆದೇಶ ಹೊರಬಿದ್ದಿದೆ ಎಂದು ಕಿಡಿ ಕಾರಿದ್ದಾರೆ. ಕಾವೇರಿ ಹೋರಾಟಗಾರ ಹಾಗೂ ತಜ್ಞ ಲಕ್ಷ್ಮಣ್, ಜುಲೈ ಅಂತ್ಯದವರೆಗೆ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರಕ್ಕೆ ಸುಮಾರು 9-10 ಟಿಎಂಸಿ ಕುಡಿಯುವ ನೀರಿನ ಅಗತ್ಯವಿದೆ. ಇನ್ನು, ಕೃಷಿ ಚಟುವಟಿಕೆಗಳಿಗೆ ಸುಮಾರು 2-3 ಟಿಎಂಸಿ ನೀರು ಬೇಕಾಗುತ್ತದೆ. ಜಲಾಶಯಗಳಲ್ಲಿ ಸುಮಾರು 28 ಟಿಎಂಸಿ ನೀರು ಸಂಗ್ರಹವಾಗಿದ್ದು, ತಮಿಳುನಾಡಿಗೆ 40 ಟಿಎಂಸಿ ನೀರು ಬಿಡುವಂತೆ ಹೇಳಿರುವುದು ಅವೈಜ್ಞಾನಿಕ ಎಂದು ತಿಳಿಸಿದ್ದಾರೆ.
ಅಲ್ಲದೆ, ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸುಮಾರು 50 ಟಿಎಂಸಿ ನೀರು ಸಂಗ್ರಹ ಇದೆ. ಹೀಗಿದ್ದಾಗ ಕಾವೇರಿ ನೀರು ಬಿಡುಗಡೆಗೆ ಆದೇಶ ನೀಡಿರುವುದು ಸರಿಯಲ್ಲ. ಇದಕ್ಕೆ ರಾಜ್ಯ ಸರ್ಕಾರ ಕೂಡಲೇ ಆಕ್ಷೇಪ ವ್ಯಕ್ತಪಡಿಸಬೇಕು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ABOUT THE AUTHOR

...view details