ಬೆಂಗಳೂರು: ಶೀಘ್ರದಲ್ಲಿಯೇ ಬಿಬಿಎಂಪಿ ಚುನಾವಣೆ ನಡೆಯಲಿದೆ. ಚುನಾವಣೆ ನಡೆಸಲು ಪಾಲಿಕೆ ಎಲ್ಲ ರೀತಿಯಲ್ಲೂ ಸಿದ್ಧವಾಗಿದೆ. ಚುನಾವಣಾ ಆಯೋಗ ಚುನಾವಣೆ ಘೋಷಿಸಿದರೆ ಎಲ್ಲ ರೀತಿಯ ಸಿದ್ದತೆಗಳನ್ನು ನಾವು ಮಾಡಿಕೊಳ್ಳುತ್ತೇವೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬಿಬಿಎಂಪಿ ಚುನಾವಣೆ ಕುರಿತು ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತುಷಾರ್ ಗಿರಿನಾಥ್, ಡಿ ಲಿಮಿಟೇಶನ್ ಮಾಡಲೇಬಾರದು ಎಂದು ನ್ಯಾಯಪೀಠ ಹೇಳಿಲ್ಲ. ಈ ಕುರಿತು ವಾರ್ಡ್ ವಿಂಗಡಣಾ ಸಮಿತಿ ಸರ್ಕಾರ ಮತ್ತು ಆಯೋಗದ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತದೆ. ಯಾವುದೇ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನಾವು ಬಿಬಿಎಂಪಿ ಚುನಾವಣೆಗೆ ಸಿದ್ಧ, ನೂರಕ್ಕೆ ನೂರು ಬಿಜೆಪಿನೇ ಗೆಲ್ಲುವುದು:ಸ್ಥಳೀಯ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಇಂದು ಮಹತ್ವದ ದಿನ. ನಾನು ಮುಖ್ಯಮಂತ್ರಿಗಳ ಜೊತೆ ಮಾತಾಡುತ್ತೇನೆ. ಇಂದು ನೀಡಿದ ತೀರ್ಪು ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ. ದೇಶದ ಎಲ್ಲ ರಾಜ್ಯಗಳಿಗೆ ಸಂಬಂಧಿಸಿದ ಆದೇಶ ಇದು. ಎರಡು ವಾರ ಸಮಯ ನೀಡಿದೆ. ಎಲೆಕ್ಷನ್ ಕಮೀಷನ್ ಡೇಟ್ ಘೋಷಣೆ ಮಾಡತ್ತದೆ ಎಂದರು.