ಬೆಂಗಳೂರು :ಉಪ್ಪಿಲ್ಲದಿರುವಾಗ ಸೊಪ್ಪಿನ ಚಿಂತೆ. ಸೊಪ್ಪು ಸಿಕ್ಕಾಗ ಉಪ್ಪರಿಗೆ ಚಿಂತೆ. ಉಪ್ಪರಿಗೆ ಸಿಕ್ಕಾಗ ಕೊಪ್ಪರಿಗೆ ಚಿಂತೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗಾಗಿಯೇ ಬರೆದಂತಿದೆ ಈ ಕವಿ ವಾಕ್ಯ. ಸದಾ ವೈರುಧ್ಯದ ಗಣಿಯಂತಿರುವ ಕುಮಾರಸ್ವಾಮಿಯವರೇ, ಬಿಡುವಿನ ಸಂದರ್ಭದಲ್ಲಿ ಆತ್ಮಶೋಧಕ್ಕೂ ಒಂದಿಷ್ಟು ಸಮಯ ಮೀಸಲಿಡಿ ಎಂದು ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.
ಕೆಪಿಎಸ್‌ಸಿ ದುರ್ಬಳಕೆ ಮಾಡಿಕೊಂಡಿದ್ದು ಅಪರಾಧವಲ್ಲವೇ?
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಟ್ವೀಟ್ ವಾರ್ ಮುಂದುವರೆಸಿದೆ. ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಾಮಾಜಿಕ ಸಂಘಟನೆಯೊಂದರ ಕುರಿತು ಸಲ್ಲದ ಅಪವಾದ ಮಾಡುವ ಹೆಚ್ಡಿಕೆ ಅವರು ಅಧಿಕಾರದಲ್ಲಿದ್ದಾಗ ಕರ್ನಾಟಕ ಲೋಕಸೇವಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದು ಅಪರಾಧವಲ್ಲವೇ?. ಹೆಚ್ ಎನ್ ಕೃಷ್ಣ ಕಾಲದಲ್ಲಿ ಕೆಪಿಎಸ್‌ಸಿ ನೇಮಕದ ಅಂತಿಮ ಆದೇಶ ಸಿದ್ದವಾಗುತ್ತಿದ್ದದ್ದೇ ಪದ್ಮನಾಭನಗರದಲ್ಲಿ ಎಂಬ ಆರೋಪ ಇದ್ದಿದ್ದು ಸುಳ್ಳೇ? ಎಂದು ಪ್ರಶ್ನಿಸಿದೆ.
ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಮಾಡಿದ್ಯಾರು?
ಕೆಪಿಎಸ್‌ಸಿಯನ್ನು ದುರ್ಬಳಕೆ ಮಾಡಿಕೊಂಡ ಕುಮಾರಸ್ವಾಮಿ ಅವರು ತಮಗೆ ಬೇಕಾದ ವ್ಯಕ್ತಿಗಳ, ಕುಟುಂಬದ ಸದಸ್ಯರಿಗೆ ಅಕ್ರಮವಾಗಿ ಸರ್ಕಾರಿ ನೌಕರಿ ಕೊಡಿಸಿದ್ದರು. ಕುಮಾರಸ್ವಾಮಿ ಅವರೇ, ಇವರಿಗೆಲ್ಲ ನೀವು ತರಬೇತಿ ನೀಡಿದ್ದೆಲ್ಲಿ? ಪದ್ಮನಾಭ ನಗರದಲ್ಲೋ, ಕೇತಗಾನ ಹಳ್ಳಿಯ ತೋಟದ ಮನೆಯಲ್ಲೋ?.
ತಮಗೆ ಬೇಕಾದ ವ್ಯಕ್ತಿಯ ಕುಟುಂಬದವರಿಗೆ ಹೆಚ್ ಎನ್ ಕೃಷ್ಣ ಮೂಲಕ ಕ್ಲಾಸ್ ಒನ್ ಅಧಿಕಾರಿ ಹುದ್ದೆ ಕೊಡಿಸಿದ್ದೆ ಎಂಬ ನಿಮ್ಮ ಹೇಳಿಕೆಗೆ ರಾಜ್ಯವೇ ಸಾಕ್ಷಿಯಾಗಿದೆ. ಹಾಗಾದರೆ, ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಯಾರು?. ಕುಮಾರಸ್ವಾಮಿಯೋ ಅಥವಾ ಸಾಮಾಜಿಕ ಸಂಘಟನೆಯೋ? ಎಂದು ಆರ್‌ಎಸ್‌ಎಸ್ ವಿರುದ್ಧದ ಹೇಳಿಕೆಗೆ ತಿರುಗೇಟು ನೀಡಿದೆ ಬಿಜೆಪಿ.
ಸ್ವಜನ 'ಪಕ್ಷ'ಪಾತ ಧೋರಣೆ ಅನಾವರಣ
ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತಮಗೆ ಬೇಕಾದವರಿಗೆ ಸರ್ಕಾರಿ ಹುದ್ದೆ ಕೊಡಿಸಿದ್ದು ಕನ್ನಡಿಗರಿಗೆ ಮಾಡಿದ ಮೋಸವಲ್ಲವೇ? ಇದರಿಂದಲೇ ನಿಮ್ಮ ಸ್ವಜನ 'ಪಕ್ಷ'ಪಾತ ಧೋರಣೆ ಅನಾವರಣವಾಗಿದೆ. ಸರ್ಕಾರಿ ಕೆಲಸ ನೀಡುವಲ್ಲಿಯೂ ಅಕ್ರಮ ಮಾಡಿದ ನೀವು ರಾಜ್ಯದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು.
ವೃದ್ಧನಾರಿ ಪತಿವ್ರತಾ
ಕುಮಾರಸ್ವಾಮಿ ಅವರೇ, "ವೃದ್ಧನಾರಿ ಪತಿವ್ರತಾ" ಎಂಬ ಮಾತು ಗೊತ್ತೇ ? ನಿಮ್ಮ ಸ್ಥಿತಿಯೂ ಹಾಗಾಗಿದೆ. ಅವಕಾಶ ಸಿಕ್ಕಾಗಲೆಲ್ಲ ಗುಟ್ಟಿನಲ್ಲಿ ತಪ್ಪು ಮಾಡುವುದು, ಬಳಿಕ ಗರತಿಯ ಸೋಗು ಹಾಕುವುದು ನಿಮ್ಮ ಹಳೇ ಚಾಳಿ. ಕೆಪಿಎಸ್‌ಸಿ ಕರ್ಮಕಾಂಡದ ರೂವಾರಿಯಾಗಿರುವ ನೀವು. ಈಗ ಊರಿಗೆ ಉಪದೇಶ ಕೊಡುವಂತಾಗಿರುವುದೇ ಕಾಲದ ಚೋದ್ಯ ಎಂದು ವ್ಯಂಗ್ಯವಾಡಿದೆ.
ಘಾತುಕತನವನು ಬಿಡದೆ ನಿರಂತರ ಗೀತೆಯನೋದಿದೊಡೇನು ಫಲ?. ಪುರಂದರ ದಾಸರ ಈ ಪದ್ಯದ ಸಾಲು ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಅಕ್ಷರಶಃ ಅನ್ವಯವಾಗುತ್ತದೆ. ನಿಮ್ಮ ತಪ್ಪು, ವೈರುಧ್ಯ, ಸಮಯ ಸಾಧಕತನವನ್ನು ಅನ್ಯರ ನಿಂದನೆಯ ಮೂಲಕ ಮುಚ್ಚಿಕೊಳ್ಳಲು ಸಾಧ್ಯವೇ?. ಕಾಗೆ ಗಂಗಾ ಸ್ನಾನ ಮಾಡಿದರೆ ಬಿಳುಪಾಗುವುದೇ? ಕುಮಾರಸ್ವಾಮಿಯವರೇ?ಎಂದು ಕುಹಕವಾಡಿದೆ.
ಡಿಕೆಶಿ ವಿರುದ್ಧ ಹರಿಹಾಯ್ದ ಬಿಜೆಪಿ :
ಏನು ಮಾಯವೋ..! ಹಳ್ಳದ ಕಡೆಗೆ ನೀರು ಹರಿಯುವುದು, ಕಾಂಗ್ರೆಸ್ ಬಳಿಗೆ ಭ್ರಷ್ಟರು ಬರುವುದು. ಡಿಕೆಶಿ ಎಲ್ಲಿರುತ್ತಾರೋ ಅಲ್ಲಿ ಅಕ್ರಮ ವಹಿವಾಟು ಇದ್ದೇ ಇರುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಈ ವ್ಯವಹಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಪಾಲೆಷ್ಟು? ಎಂದು ಭ್ರಷ್ಟ ಕಾಂಗ್ರೆಸ್ ಹ್ಯಾಷ್ ಟ್ಯಾಗ್‌ನೊಂದಿಗೆ ಬಿಜೆಪಿ ಟ್ವೀಟ್ ಮಾಡಿದೆ.
ದೇಶದಲ್ಲಿ ಸಾಕಷ್ಟು ಶಾಲೆಗಳಿದ್ದವು. ಆದರೆ, 50 ವರ್ಷ ಮೇಲ್ಪಟ್ಟ ಅತಿ ಹಿರಿಯ ಯುವ ನಾಯಕ ಭಾರತದಲ್ಲಿ ಓದಲೇ ಇಲ್ಲ. ವಯಸ್ಕರ ಶಿಕ್ಷಣ ಯೋಜನೆಯಿದ್ದರೂ, ಪಪ್ಪುವಿನ ಬುದ್ಧಿ ಬೆಳೆಯಲೇ ಇಲ್ಲ. ತಾತ, ಮುತ್ತಾತ, ಅಪ್ಪ ಪ್ರಧಾನಿಯಾಗಿದ್ದಾರೆ ಎಂಬ ಒಂದೇ ಅರ್ಹತೆಯ ಆಧಾರದ ಮೇಲೆ ತಾನು ಪ್ರಧಾನಿಯಾಗುತ್ತೇನೆ ಎಂದು ಭಿಕ್ಷುಕನಂತೆ ಅಲೆಯುತ್ತಿದ್ದಾನೆ ಎಂದು ಬಿಜೆಪಿ ಟೀಕಿಸಿದೆ.