ಬೆಂಗಳೂರು:ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ನೀಡಿರುವ ಮಾಜಿ ಶಾಸಕ ಸುರೇಶ್ ಗೌಡಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದೂರವಾಣಿ ಕರೆ ಮಾಡಿ ಎಚ್ಚರಿಕೆ ನೀಡಿದ್ದು, ಇನ್ಮುಂದೆ ನಾಯಕತ್ವ ವಿಚಾರ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ.
ಸುರೇಶ್ ಗೌಡ ಹೇಳಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಕಾಂಗ್ರೆಸ್, ಬಿಜೆಪಿ ಮೇಲೆ ಮುಗಿಬಿದ್ದಿದೆ. ಜೊತೆಗೆ ಮುಖ್ಯಮಂತ್ರಿ ಬದಲಾವಣೆ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆ ಸುರೇಶ್ ಗೌಡಗೆ ರಾಜ್ಯಾಧ್ಯಕ್ಷ ಕಟೀಲ್ ಸಂಜೆ ದೂರವಾಣಿ ಕರೆ ಮಾಡಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ ನೀಡುವುದು ಅಶಿಸ್ತು ಆಗಲಿದ್ದು, ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
(ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಅಂತಹ ಹೇಳಿಕೆ ನಿಲ್ಲಿಸಿ: ಬಿಎಸ್ವೈ)
ಅಲ್ಲದೇ ಪಕ್ಷದ ಯಾವುದೇ ಹಂತದ ನಾಯಕರು ನಾಯಕತ್ವ ಬದಲಾವಣೆಯ ಕುರಿತು ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಕೂಡ ದೂರವಾಣಿ ಕರೆ ಮಾಡಿ ಸುರೇಶ್ ಗೌಡಗೆ ತರಾಟೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಗುಸುಗುಸು ಮೊದಲಿನಿಂದಲೂ ಇತ್ತು. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ರಾಜ್ಯ ಭೇಟಿ ಬಳಿಕ ಅದಕ್ಕೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿತ್ತು. ಈ ಮಧ್ಯೆ ಸ್ವತಃ ಬಿಜೆಪಿ ಮಾಜಿ ಶಾಸಕರೇ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿರುವುದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ಆ ಬಳಿಕ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿ, ಸಿಎಂ ಬದಲಾವಣೆ ಕೇವಲ ಊಹಾಪೋಹ. ಆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದಿದ್ದಾರೆ.
(ಓದಿ: ಸಿಎಂ ಬದಲಾವಣೆ ಕೇವಲ ಊಹಾಪೋಹ: ರಾಯರ ಸನ್ನಿಧಿಯಲ್ಲಿ ಯಡಿಯೂರಪ್ಪ ಪುನರುಚ್ಚಾರ)