ಬೆಂಗಳೂರು:ನನ್ನ ಮಾತಿನಿಂದ ಮೂಲ ಕ್ರೈಸ್ತ ಸಮುದಾಯಕ್ಕೆ ನೋವಾಗಿದ್ದರೆ ಬಹಿರಂಗ ಕ್ಷಮೆ ಕೋರುತ್ತೇನೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ತಿಳಿಸಿದ್ದಾರೆ.
ಮೂಲ ಕ್ರೈಸ್ತರಿಗೆ ನೋವಾಗಿದ್ದರೆ ಬಹಿರಂಗ ಕ್ಷಮೆ ಕೋರುತ್ತೇನೆ: ಗೂಳಿಹಟ್ಟಿ ಶೇಖರ್ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ ಮೂಲ ಕ್ರಿಶ್ಚಿಯನ್ (ಕ್ರೈಸ್ತ ಸಮುದಾಯದಲ್ಲೇ ಹುಟ್ಟಿದವರು) ಸಮುದಾಯದವರ ಪರವಾಗಿದೆ. ನಾವೂ ಕೂಡ ಕ್ರೈಸ್ತ ಸಮಾಜ, ಮಿಷನರಿ ಪರವಾಗಿದ್ದೇವೆ. ಆದರೆ ಬಲವಂತವಾಗಿ ಮತಾಂತರ ಮಾಡುತ್ತಿರುವವರ ವಿರುದ್ಧ ನಮ್ಮ ಸಮರ ಇದ್ದೇ ಇರುತ್ತದೆ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.
ಹುಟ್ಟಿದಾಗಿನಿಂದ ಕ್ರೈಸ್ತರಾಗಿರುವವರ ಧಾರ್ಮಿಕ ಭಾವನೆಗೆ ನೋವು ಬರುವಂತೆ ನಾವು ಮಾತನಾಡುವುದಿಲ್ಲ. ನನ್ನ ಮಾತಿನಿಂದ ನೋವಾಗಿದ್ರೆ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ. ಸಣ್ಣ ಪುಟ್ಟ ನೋವಾಗಿದ್ರೆ, ನಮಗೂ ಆಗಿದೆ. ಹಿಂದೂಗಳಾಗಿ ಹುಟ್ಟಿ, ನಾವು ಸಾಕಷ್ಟು ನೋವು ತಿನ್ನುತ್ತಿದ್ದೇವೆ. ನಾನು ಬ್ಯಾಕ್‌ವರ್ಡ್, ಮೈನಾರಿಟಿ ಸಮಿತಿಯಲ್ಲಿದ್ದೇನೆ. ಅಲ್ಲಿರುವ ಕಲ್ಯಾಣ ಕಾರ್ಯಕ್ರಮದಲ್ಲಿ ಪ್ರತೀ ತಿಂಗಳು ಪರಿಶೀಲನಾ ಸಭೆ ಮಾಡುತ್ತೇವೆ. ಹಿಂದುಳಿದವರು ಶೇ 75 ಇದ್ದಾರೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಮುಸ್ಲಿಂ, ಸಿಖ್, ಪಾರ್ಸಿ ಎಲ್ಲರೂ ಬರುತ್ತಾರೆ. ಮುಸ್ಲಿಂ ಕಾರ್ಯಕ್ರಮದಲ್ಲಿ ಶಾದಿ ಮಾಲ್ ಸೇರಿದಂತೆ ಹಲವು ವಿಚಾರ ಚರ್ಚೆಗೆ ಬರಲಿದೆ ಎಂದರು.
ಸಹಜವಾಗಿ ಎಷ್ಟು ಮಸೀದಿ, ಚರ್ಚ್ ಇದೆ ಎಂದು ಕೇಳಿದ್ದೇವೆ. ದರ್ಗ, ಚರ್ಚ್, ಸ್ಮಶಾನ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು. ಹಾಗಾಗಿ ಕಮಿಟಿಯಲ್ಲಿ ವರದಿ ಕೇಳಿದ್ದೇವೆ. ಸುಮಾರು 1,790 ಚರ್ಚ್ ಇರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ವಿವರಿಸಿದರು.
ಆದರೆ ಚರ್ಚ್ಗಳ ಮಾಹಿತಿ ಕಲೆಹಾಕುವ ಸಂದರ್ಭದಲ್ಲಿ ಗಲಾಟೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು. ಹೀಗಾಗಿ ಇನ್ನೊಮ್ಮೆ ಪರಿಶೀಲನೆ ನಡೆಸಲು ತಿಳಿಸಿದ್ದೇವೆ. ಒಂದು ತಿಂಗಳೊಳಗೆ ಎಷ್ಟು ಅಧಿಕೃತ ಚರ್ಚ್ಗಳಿವೆ ಎಂಬ ಬಗ್ಗೆ ವಿವರವಾದ ವರದಿ ನೀಡಿ ಎಂದು ಅಧಿಕಾರಿಗಳಿಗೆ ಕೇಳಿದ್ದೆವು. ಯಾವುದೇ ಚರ್ಚ್ಗಳ ಸಮೀಕ್ಷೆ ನಡೆಸಲು ಸೂಚನೆ ನೀಡಿಲ್ಲ ಎಂದು ಗೂಳಿಹಟ್ಟಿ ಸ್ಪಷ್ಟಪಡಿಸಿದರು.
ನಮ್ಮ ಸಂವಿಧಾನ, ಕಾನೂನಿನಲ್ಲಿ ಸ್ವ-ಇಚ್ಛೆಯಿಂದ ಯಾವುದೇ ಧರ್ಮ ಪಾಲನೆಗೆ ಅವಕಾಶ ಇದೆ. ಆದ್ರೆ ಬಲವಂತವಾಗಿ ಮತಾಂತರ ಮಾಡುವಂತಿಲ್ಲ. ಮತಾಂತರ ಮಾಡುತ್ತಿರುವ ಬಗ್ಗೆ ದೂರು ದಾಖಲಾದರೆ, ತನಿಖೆ ಕೈಗೊಂಡು ಸತ್ಯಾಸತ್ಯತೆ ತಿಳಿಯಬೇಕಿದೆ. ಮತಾಂತರ ಪಿಡುಗು ಎಲ್ಲೆಡೆ ಆಗುತ್ತಿತ್ತು. ರಾಜಕಾರಣಿಯಾಗಿ ನಾನು ಮಾತನಾಡಿದರೆ, ನನ್ನ ಮತಗಳು ಎಲ್ಲಿ ಹೋಗಲಿವೆಯೋ ಎಂಬ ಭಯ ನನಗಿದೆ. ಆದರೂ ನಾನು ಸದನದಲ್ಲಿ ಮಾತನಾಡಿದೆ ಎಂದರು.
ಇದನ್ನೂ ಓದಿ:ಬಲವಂತದ ಮತಾಂತರ ಭೀತಿ: ರಾಜ್ಯದ ಚರ್ಚ್ಗಳ ಸರ್ವೆ ನಡೆಸಲು ಗೂಳಿಹಟ್ಟಿ ನೇತೃತ್ವದ ಸಮಿತಿ ಶಿಫಾರಸು!